ಭಗೀರಥ ಆದರ್ಶ ಮೈಗೂಡಿಸಿಕೊಳ್ಳಿ
ರಾಯಚೂರು, ಆ.೧೧- ಭಗೀರಥ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ ಹೇಳಿದರು.
ಅವರಿಂದು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಗಿರಥ ಜಯಂತೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸರಕಾರಿ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೂರ್ಯವಂಶದ ರಾಜನಾಥ ಭಾಗಿರಥ ಮಹಾರಾಜ ತನ್ನ ಜನರಿಗಾಗಿ ಶಿವನ ತಪಸ್ಸು ಮಾಡಿ ಗಂಗೆಯನ್ನು ಧರೆಗೆ ತಂದ ಮಹಾಪುರುಷ ಅವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತ ಎಂದರು
ಉಪ್ಪಾರ ಸಮಾಜದವರು, ಭಗೀರಥನ ಕಠಿಣ ಪ್ರಯತ್ನದಂತೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು ಎಂದು ಕಿವಿಮಾತು ಹೇಳಿದರು. ಸಮಾಜದವರು ಸುಶಿಕ್ಷಿತರಾಗಿ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಿ ಉತ್ತಮ ಸ್ಥಾನಗಳಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಪ್ರಾರಂಭಕ್ಕೂ ಮುಂಚೆ ಬೆಳಗ್ಗೆ ೭ ಗಂಟೆಗೆ ಶ್ರೀ ಮಹರ್ಷಿ ಭಗೀರಥ ಭಾವಚಿತ್ರ ಮೆರವಣಿಗೆಯನ್ನು ನಗರದ ಉಪ್ಪರವಾಡಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಮಂಗಳಮಂದಿರದ ವೇದಿಕೆಯವರಿಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಬಗ್ಗಾರೆಡ್ಡ, ಸಂಘದ ಪ್ರಧಾನ ಕಾರ್ಯದರ್ಶಿ ಆದಿರಾಜ ಅದೋನಿ, ಸಮಾಜದ ಮುಖಂಡರಾದ ಅಮರೇಶ್, ಬಸವರಾಜ್ ಸೇರಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಈ ದೇವಣ್ಣ ನಾಯಕ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.