ಶ್ರಾವಣ ಗಾನಯಾನ
ಲಕ್ಷ್ಮೇಶ್ವರ,ಆ.11: “ಸರ್ವ ಹಬ್ಬಗಳ ಸಮನ್ವಯ ಸಹಯೋಗವೇ ಶ್ರಾವಣ ಮಾಸ. ಶ್ರಾವಣ ಮಾಸದಲಿ ಪ್ರಕೃತಿಯು ಕೂಡ ತನ್ನದೇ ರೀತಿಯಲ್ಲಿ ಹಾಡಿಕೊಂಡು ಸಂಭ್ರಮಿಸುತ್ತದೆ” ಎಂದು ಜಗದ್ಗುರು ಶ್ರೀ ವೀರಗಂಗಾಧರ ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರದ ಮುಖ್ಯೋಪಾಧ್ಯಾಯ ಬಿ.ಸಿ.ಪಟ್ಟೇದ ಅಭಿಪ್ರಾಯ ಪಟ್ಟರು. ಅವರು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ “ಮಾಸದ ಮಾತು” ಕಾರ್ಯಕ್ರಮ ಸರಣಿಯ 15ನೇ ಸಂಚಿಕೆ “ಶ್ರಾವಣ ಗಾನಯಾನ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರಾವಣ ಮಾಸದ ಸವಿ ಮಾತನ್ನು ಹಂಚಿಕೊಂಡ ವಿಶ್ರಾಂತ ಮುಖ್ಯೋಪಾಧ್ಯಾಯ ಸಾಹಿತಿ ರಮೇಶ ನವಲೆ “ಶ್ರಾವಣ ಮಾಸವನ್ನು ದೇಶದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ. ಶ್ರಾವಣವು ಮಾಸಗಳ ರಾಜನೆಂದೇ ಪರಿಗಣಿಸಲಾಗಿದೆ. ಈ ನೆಲದ ಮಣ್ಣಿನ ಮಗ ತನ್ನ ಬದುಕಿನ ಹೊಲವನ್ನು ಮತ್ತಷ್ಟು ಅಂದ ಚಂದಗೊಳಿಸಲು ಶ್ರಾವಣ ಮಾಸದಲ್ಲಿ ಪುರಾಣ ಪುಣ್ಯ ಕಥೆಗಳು, ಸಂದೇಶ ಬೀರುವ ಗೀತೆಗಳನ್ನು ಶ್ರವಣವನ್ನು ಮಾಡುವ ಪದ್ಧತಿ ನಮ್ಮ ಹಿರಿಯರು ಹಾಕಿಕೊಟ್ಟ ಶ್ರೀಮಂತ ಸಂಪ್ರದಾಯವಾಗಿದೆ” ಎಂದರು.
ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪೂರ್ಣಾಜಿ ಕರಾಟೆ ಮಾತನಾಡಿ “ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮ ನೆನಪಿಗಾಗಿ ಒಂದು ವರ್ಷದಲ್ಲಿ 50 ಕಾರ್ಯಕ್ರಮಗಳನ್ನು ಯೋಜಿಸಿ ಈಗಾಗಲೇ 21 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆದಿರುವುದು ಒಂದು ಮಾದರಿಯಾಗಿದೆ” ಎಂದರು.
ಶ್ರಾವಣದ ಸವಿಗಾನ ನಡೆಸಿಕೊಟ್ಟ ಯುನಿಕ್ ಶಾಲೆಯ ಕು.ಪಂಚಮಿ ಅಂಬಿಗೇರ ಹಾಗೂ ಸಂಗಡಿಗರು, ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರದ ವಿದ್ಯಾರ್ಥಿಗಳು ಮತ್ತು ಸಂತೋಷ್ ಗುಡಗೇರಿ ಶ್ರಾವಣದ ಕುರಿತಾಗಿರುವ ವಿವಿಧ ಗೀತ ಗಾಯನ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಡಿ.ಲಮಾಣಿ, ವಿಶ್ರಾಂತ ಶಿಕ್ಷಕ ಎನ್.ಆರ್.ಸಾತಪುತೆ ಅತಿಥಿಪರ ನುಡಿಗಳನ್ನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಈಳಿಗೇರ, ಅದರ ಸದಸ್ಯರಾದ ಬಿ.ಬಿ. ಹುಬ್ಬಳ್ಳಿ,ವಿಶ್ವನಾಥ ಕರಾಟೆ, ಅಂದಾನಪ್ಪ ವಾಲಿಶೆಟ್ರ ಉಪಸ್ಥಿತರಿದ್ದರು.
ಲಕ್ಷ್ಮೇಶ್ವರ ಉತ್ತರ ವಲಯದ ಸಿ.ಆರ್.ಪಿ ಉಮೇಶ್ ನೇಕಾರ ಸ್ವಾಗತಿಸಿದರು.ತಾಲೂಕ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಎ.ಎಂ.ಅಕ್ಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಸಲಹಾ ಸಮಿತಿಯ ಈರಣ್ಣ ಗಾಣಿಗೇರ, ಎಸ್.ಬಿ.ಅಣ್ಣಿಗೇರಿ, ಶಿಕ್ಷಕರಾದ ಪಿ.ಎಸ್.ಪುರಾಣದ, ಶ್ರೀಮತಿ ಅರ್.ಐ ಹಬಸಿ,ಶ್ರೀಮತಿ ಎ.ಎಂ.ಕುಂಬಾರ, ಸಿ.ಎಫ್. ಪಾಟೀಲ,ಆರ್.ಟಿ. ಚವ್ಹಾಣ, ಶ್ರೀಮತಿ ಆರ್.ಆರ್.ನಾಯ್ಕರ ಮುಂತಾದವರು ಉಪಸ್ಥಿತರಿದ್ದರು.