ಮುಚ್ಚುವ ಹಂತಕ್ಕೆ ಬಂದ ಬೀದರ್ ವಿಮಾನ ನಿಲ್ದಾಣ
ಬೀದರ್: ಆ.11: ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡ ಬೆನ್ನಲ್ಲೇ ಭದ್ರತಾ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲು ನಿರ್ಧರಿಸಿರುವುದರಿಂದ ಬೀದರ್ ವಿಮಾನ ನಿಲ್ದಾಣ ಮುಚ್ಚುವ ಹಂತಕ್ಕೆ ಬಂದಿದೆ.ಬೀದರ್ ವಿಮಾನ ನಿಲ್ದಾಣದ ಭದ್ರತೆಗೆ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆಯ (ಕೆಎಸ್‍ಐಎಸ್‍ಎಫ್) ಅಧಿಕಾರಿ, ಸಿಬ್ಬಂದಿ ಸೇರಿದಂತೆ ಒಟ್ಟು 45 ಜನರನ್ನು ನಿಯೋಜಿಸಲಾಗಿತ್ತು.ವಿಮಾನ ಹಾರಾಟ ಸ್ಥಗಿತಗೊಂಡ ನಂತರ ಅವರನ್ನು ತಾತ್ಕಾಲಿಕವಾಗಿ ಡಿಎಆರ್‍ನಲ್ಲಿ ಬಳಸಿಕೊಳ್ಳಲಾಗುತ್ತಿತ್ತು.
ಈಗ ವಿಜಯಪುರದ ನೂತನ ವಿಮಾನ ನಿಲ್ದಾಣ ಆರಂಭಿಸಲು ನಿರ್ಧರಿಸಲಾಗಿದ್ದು, ಅಲ್ಲಿನ ಭದ್ರತೆಗಾಗಿ ಇಲ್ಲಿನ 40 ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಬೇಡಿಕೆಯ ಸಮಯಕ್ಕೆ ತಕ್ಕಂತೆ ವಿಮಾನ ಸಂಚರಿಸದ ಕಾರಣ ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿ ‘ಸ್ಟಾರ್ ಏರ್’, ಒಪ್ಪಂದದ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ 2023ರ ಡಿಸೆಂಬರ್ 26ರಂದು ವಿಮಾನ ಸಂಚಾರ ಸ್ಥಗಿತಗೊಳಿಸಿತ್ತು.
ಎಂಟು ತಿಂಗಳಾಗುತ್ತ ಬಂದರೂ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗಿರಲಿಲ್ಲ.ಕೆಲ ದಿನಗಳ ಹಿಂದೆ ಸಂಸದ ಸಾಗರ ಖಂಡ್ರೆ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಹೊಸದಾಗಿ ವಿಮಾನ ಹಾರಾಟ ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ ಅಧಿಕಾರಿಗಳೊಂದಿಗೆ ಸಾಧಕ-ಬಾಧಕ ಕುರಿತು ಸಭೆ ನಡೆಸಿ, ವಿಮಾನ ಹಾರಾಟ ಪುನರಾರಂಭಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸುವ ನಿರ್ಧಾರ ಹೊರಬಿದ್ದಿದೆ.