ದ್ರಾಕ್ಷಿ ಮಂಡಳಿಗೆ ನೀಡಿದ ಸರಕಾರಿ ಜಮೀನಿನಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿ ಕೈಗೊಳ್ಳಿ: ಡಿಸಿಗೆ ಜಲ ಬಿರಾದರಿ ಸಂಘಟನೆ ಮನವಿ
ವಿಜಯಪುರ,ಆ.11:ನಗರ ಹೊರ ವಲಯದ ರಾಮಲಿಂಗ ಕೆರೆ ಜಲಾನಯನ ಪ್ರದೇಶದಲ್ಲಿ ಪರಿಸರ ಸ್ನೇಹಿ ಆಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಲ ಬಿರಾದರಿ ಸಂಘಟನೆ ವತಿಯಿಂದ ರಾಮಲಿಂಗ ಕೆರೆ ಪ್ರದೇಶದ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜಲ ಬಿರಾದರಿ ಜಿಲ್ಲಾ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಅವರು ಮಾತನಾಡಿ, ವಿಜಯಪುರ ನಗರÀ ಹೊರ ವಲಯದಲ್ಲಿ ಇರುವ ತೊರವಿ ಗ್ರಾಮದ ವ್ಯಾಪ್ತಿಯಲ್ಲಿ ದ್ರಾಕ್ಷಾರಸ ನಿಗಮ ಮಂಡಳಿಗೆ 2011ರಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ 141 ಎಕರೆ ಸರಕಾರಿ ಭೂಮಿ ಮಂಜೂರಾಗಿದೆ. ಸಂಬಂಧಿಸಿದ ಪ್ರದೇಶ ಐತಿಹಾಸಿಕ ರಾಮಲಿಂಗ ಕೆರೆಯ ಜಲಾನಯನ ಪ್ರದೇಶವಾಗಿದ್ದು, ಆ ಪ್ರದೇಶದಲ್ಲಿ ಮತ್ತೊಂದು ಚಿಕ್ಕಕೆರೆ ಹಾಗೂ ಹಳ್ಳ ಕೊಳ್ಳಗಳಿವೆ. ಇದರಿಂದ ರಾಮಲಿಂಗ ಕೆರೆಗೆ ನೀರು ಬಂದು ನಂತರ ಆ ಮೂಲಕ ಭೂತನಾಳ ಕೆರೆಗೆ ಸಂಗ್ರಹವಾಗುತ್ತದೆ ಎಂದರು.
ಆದರೆ ಈ ಪ್ರದೇಶದಲ್ಲಿ ಈಗ ಕಾಮಗಾರಿ ಅಭಿವೃದ್ಧಿಗಾಗಿ ಟೆಂಡರ್ ಆಗಿದೆ. ಆ ಮೂಲಕ ಈ ಪ್ರದೇಶದಲ್ಲಿ ಅತೀ ಹೆಚ್ಚು ಕೆಮಿಕಲ್ ಬಳಕೆಯಿಂದ ತಯಾರಾಗುವ ದ್ರಾಕ್ಷಿ ಹಣ್ಣಿಗೆ ಸಂಬಂಧಿಸಿದ ಘಟಕಗಳು ತಯಾರಾಗುತ್ತಿವೆ. ಇಂಡಸ್ಟ್ರಿ ತಯಾರಿಸಿ ದ್ರಾಕ್ಷಾರಸ ತಯಾರಿಸುವ ಘಟಕ ನಿರ್ಮಿಸಿದರೆ, ವೈನ್ ತಯಾರಿಸುವ ಘಟಕ ನಿರ್ಮಿಸಿದರೆ ಇದರ ಪ್ರಿಸರ್‍ವೇಟಿವ್‍ಗಾಗಿ ಮತ್ತು ಮೌಲ್ಯವಧರ್Àನೆ ಪ್ರಕ್ರಿಯೆಗೆ ಬಳಸುವ ರಾಸಾಯನಿಕ ಬಳಕೆಯಿಂದ ಹೊರ ಸೂಸುವ ಎಲ್ಲಾ ಕಚ್ಚಾ ವಸ್ತುವಿನಿಂದ ಆ ಜಲನಯನ ಪ್ರದೇಶ ಮೂಲಕ ಕೆರೆಗಳಿಗೆ ನುಗುತ್ತದೆ. ಇದರಿಂದ ಕೆರೆಯ ನೀರು ಕಲುಷಿತಗೊಳ್ಳುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಲ ಬಿರಾದರಿ ಜಿಲ್ಲಾ ಕಾರ್ಯದರ್ಶಿ ಬಾಳು ಜೇವೂರ ಮಾತನಾಡಿ, ಐತಿಹಾಸಿಕ ಬಾವಿಗಳು, ಕೆರೆಗಳು, ಸ್ಮಾರಕಗಳು ಮತ್ತು ಜಲಾನಯನ ಪ್ರದೇಶಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ನಂತರ ಆ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನ ಮೇಲೆ ಕಾಮಗಾರಿ ಆರಂಭಿಸಲಾಗುತ್ತಿದೆ. ಇದರ ಪರಿಣಾಮವಾಗಿ ಸಾರ್ವಜನಿಕ ಪ್ರದೇಶಗಳು ಉದ್ಯಮಿಗಳ, ರಾಜಕೀಯ ನಾಯಕರ ಪಾಲಾಗಿ ಪರಿಸರ ಸ್ನೇಹಿ ವಿರುದ್ಧ ಚಟುವಟಿಕೆಗಳು ನಡೆಯುತ್ತವೆ. ಆ ಮೂಲಕ ವಿಜಯಪುರದ ಜನತೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಸಾರ್ವಜನಿಕರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಜಲ ಬಿರಾದರಿ ಅಭಿವೃದ್ಧಿ ವಿರೋಧಿಯಲ್ಲ. ಅಭಿವೃದ್ಧಿಗಳು ಪರಿಸರದ ಮೇಲೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಭವಿಷ್ಯದಲ್ಲಿ ನೈಸರ್ಗಿಕ ವಿಕೋಪಗಳಿಗೆ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಒಳಪಡಬೇಕಾಗುತ್ತದೆ. ಇದು ನೈಸರ್ಗಿಕ ನಿಯಮ ಹಾಗೂ ಐತಿಹಾಸಿಕ ದಾಖಲೆ ಮತ್ತು ವೈಜ್ಞಾನಿಕ ಸತ್ಯವಾಗಿದೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಗಮ, ಮಂಡಳಿಯಿಂದ ಆ ಪ್ರದೇಶದಲ್ಲಿ ಉದ್ಯಾನವನ, ಗಿಡಮರಗಳು ಬೆಳೆಸಿ ಪರಿಸರ ಸ್ನೇಹಿಯಾಗಿ ಉಳಿಸಲು ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಲ ಬಿರಾದರಿಯ ಪದಾಧಿಕಾರಿಗಳಾದ ಮಂಥನ ಜೋಶಿ, ಪ್ರವೀಣ ಪಾಟೀಲ, ಸತೀಶ ದೇಶಮುಖ, ಅಮೀನ್ ಹಲ್ಲೂರ ಹಾಗೂ ಇತರರು ಇದÀ್ದರು.