ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ನೀಡಿ ‘ಬಸವ ಪಂಚಮಿ’ ಆಚರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.11 ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಅಪೌಷ್ಠಿಕತೆಯ ಮಕ್ಕಳು, ರೋಗಿಗಳಿಗೆ ಕುಡಿಯಲು ಹಾಲು ನೀಡುವ ಮೂಲಕ   ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಸಯುಕ್ತಾಶ್ರಯದಲ್ಲಿ  ‘ಬಸವ ಪಂಚಮಿ’ಯನ್ನು ವೈಚಾರಿಕ ನೆಲೆಯಲ್ಲಿ ಆಚರಿಸಲಾಯಿತು.
ಆರಂಭದಲ್ಲಿ ಬಸವೇಶ್ವರ ವೃತ್ತದಲ್ಲಿ ಸಂಘಟನೆಗಳ ಮುಖಂಡರು ಜಗಜ್ಯೋತಿ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಭೆ ನಡೆಸಿದರು.
ಪ್ರಗತಿಪರ ಚಿಂತಕ ಅಕ್ಕಿ ಬಸವೇಶ ಮಾತನಾಡಿ , ಬಸವಣ್ಣನವರು ಲಿಂಗೈಕ್ಯರಾದ 829ನೇ ವರ್ಷವಾಗಿದೆ. ಪ್ರತಿವರ್ಷ ಇದೇ ದಿನ ಪಂಚಮಿಯನ್ನು ಸಂಭ್ರಮದಿಂದ ಆಚರಿಸುವುದು ತಿಳಿದ ವಿಚಾರವಾಗಿದೆ. ಆದರೆ ಈ ಸಂದರ್ಭದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಮಣ್ಣಿನ ಹುತ್ತಗಳಿಗೆ ಮತ್ತು ಕಲ್ಲುಗಳಿಗೆ ಸುರಿದು ವ್ಯರ್ಥ ಮಾಡುವುದು ನೋವಿನ ಸಂಗತಿಯಾಗಿದೆ. ಹನ್ನೆರಡನೆಯ ಶತಮಾನದಲ್ಲಿಯೇ ತಮ್ಮ ವಚನಗಳಲ್ಲಿ ಶರಣರು ಇಂಥ ಮೌಢ್ಯವನ್ನು ಖಂಡಿಸಿದ್ದಾರೆ. ರೈತರು ಅತ್ಯಂತ ಶ್ರಮವಹಿಸಿ ಉತ್ಪಾದನೆ ಮಾಡಿದ ಉತ್ಕೃಷ್ಟ ಪೋಷಕಾಂಶಭರಿತ ಹಾಲನ್ನು ಹುತ್ತ, ಕಲ್ಲಿಗೆ ಸುರಿದು ವ್ಯರ್ಥ ಮಾಡದೇ ನಾವು ಕುಡಿಯುವುದರ ಜೊತೆಗೆ ಅವಶ್ಯಕತೆ ಇರುವ ಮಕ್ಕಳು ಹಾಗೂ ರೋಗಿಗಳಿಗೆ ಕುಡಿಯಲು ಕೊಡಬೇಕು. ಇದರಿಂದ ಹಾಲು ಉತ್ಪಾದನೆ ಮಾಡಿದ ರೈತ, ಕಾರ್ಮಿಕರ ಶ್ರಮ ಸಾರ್ಥಕವಾಗುತ್ತದೆ.ಈ ಮೂಲಕ ಪ್ರತಿಯೊಬ್ಬರೂ ಮೌಢ್ಯ, ಕಂದಾಚಾರ ಬಿಟ್ಟು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.
ಪರಿಸರ ಪ್ರೇಮಿ ಗಣೇಶರಾವ್ ಹವಾಲ್ದಾರ,ಪರಿವರ್ತನಾ ಚಾರಿಟಬಲ್ ಟ್ರಸ್ಟ್ ನ ಜಿ. ಸರೋಜ,ವೀರಣ್ಣ ಕಲ್ಮನಿ, ಕೊಟಗಿ ಮಲ್ಲಿಕಾರ್ಜುನ ಮಾತನಾಡಿದರು. ಹಿರಿಯ ಸಾಹಿತಿಗಳಾದ ಎ. ಆರ್.  ಪಂಪಣ್ಣ, ಕಸಾಪ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಮನಿ, ನಿವೃತ್ತ ಶಿಕ್ಷಕರಾದ ವಿ. ಬಿ. ಮಲ್ಲೇಶಪ್ಪ, ಹೊಸೂರ ಭರಮಲಿಂಗಪ್ಪ, ಪಿ. ಅನಂತ, ಜಯಸೂರ್ಯ, ಶಂಷಾದ್‌ಬೇಗಂ, ಎಸ್. ಹುಲಿಗೆಮ್ಮ, ಅಂಬಿಕ, ಅನ್ವರ್‌ ಬಾಷ, ಕೆ. ಗಂಗಾಧರ, ಯು. ಬಸವರಾಜ, ಮಂಜುನಾಥ ಗಂಡಿ, ಹತ್ತಿ ಪ್ರಶಾಂತ, ಹುಳ್ಳಿ ಪ್ರಕಾಶ, ಒ. ತಿಂದಪ್ಪ, ಸಂತೋಷ ಕುಮಾರ ಮತ್ತು ಇತರರು ಇದ್ದರು.
ಹೆಚ್. ಉಸ್ಮಾನ್‌ಬಾಷ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.