ಭಾಲ್ಕಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಒದುಗಿಸಲು ಮನವಿ
ಭಾಲ್ಕಿ:ಆ.11:ಪಟ್ಟಣದ ಬೀದರ್ ಮುಖ್ಯ ರಸ್ತೆಯ ಅರ್ಬನ್ ಬ್ಯಾಂಕ್ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಸಂಸದ ಸಾಗರ ಖಂಡ್ರೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರನ್ನು ಭೇಟಿಯಾದ ಸಂಸದರು, ಪಟ್ಟಣದ ರೈಲ್ವೆ ಗೇಟ್ ಬಳಿ ಪ್ರತಿದಿನ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ.
ರೈಲು ಓಡಾಟ ಹೆಚ್ಚಿದರಿಂದ ಪದೇಪದೇ ರೈಲ್ವೆ ಗೇಟ್ ಹಾಕಾಗುತ್ತಿದೆ. ಇದರಿಂದ ಆಸ್ಪತ್ರೆ, ತುರ್ತು ಕೆಲಸ ಇದ್ದವರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಕೂಡಲೇ ತಾವುಗಳು ವಿಶೇಷ ಕಾಳಜಿ ವಹಿಸಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಬೀದರ್ ಮುಖ್ಯ ರಸ್ತೆಯ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಅನುದಾನ ಒದಗಿಸುವಂತೆ ಕೇಂದ್ರದ ಸಚಿವ ನಿತಿನ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರ ಕೈಗೊಳ್ಳುವ ಭರವಸೆ ನೀಡಿದ್ದಾರೆ.