ಸಂತೃಪ್ತ ಜೀವನಕ್ಕೆ ಬಸವತತ್ವ ಪೂರಕ
ಭಾಲ್ಕಿ:ಆ.11: ವ್ಯಕ್ತಿಯ ಸಂತೃಪ್ತ ಜೀವನಕ್ಕೆ ಬಸವಾದಿ ಶರಣರ ಸಂದೇಶಗಳು ಪೂರಕವಾಗಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಶನಿವಾರ ಆಯೋಜಿಸಿದ್ದ ಬೀದರ್ ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ) ಡಾ.ಗಿರೀಶ ಬದೋಲೆ ಅವರ ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವತತ್ವದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಕಷ್ಟದಲ್ಲಿರುವ ಜನರ ಕಣ್ಣೀರೋರಿಸುವುದೇ ನಿಜವಾದ ಬಸವಧರ್ಮ. ಜೀವನದಲ್ಲಿ ಎಂದಿಗೂ ಹಣ, ಸಂಪತ್ತು, ಆಸ್ತಿ, ಅಧಿಕಾರ ಮುಖ್ಯವಾಗಬಾರದು.
ಶಾಂತಿ, ನೆಮ್ಮದಿ ಇಲ್ಲದ ಅರಮನೆ ವಾಸವೂ ಸೆರೆಮನೆ ಆಗುತ್ತದೆ. ಹೀಗಾಗಿ ಇದ್ದಿದ್ದರಲ್ಲಿಯೇ ತೃಪ್ತಿಕರ ಜೀವನ ಸಾಗಿಸಿದರೇ ದೇವನ ಒಲವು ಆಗುತ್ತದೆ.
ಜೀವನದಲ್ಲಿ ಕಷ್ಟ, ಸುಖ, ನೋವು ನಲಿವು ಎಲ್ಲವೂ ಬರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಜಿಪಂನ ಸಿಇಓ ಡಾ.ಗಿರೀಶ ಬದೋಲೆ ಅವರು ಜಿಲ್ಲೆಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅವರು ಶ್ರೀಮಠದ ಮಕ್ಕಳೊಂದಿಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಹಿರೇಮಠ ಸಂಸ್ಥಾನದ ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ. ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮ ಕ್ಷೇತ್ರದ ಮೂಲಕ ಅದ್ಭುತ ಕೊಡುಗೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಡಾ.ಹಂಸಾ ಗಿರೀಶ ಬದೋಲೆ ಮಾತನಾಡಿ, ಇಲ್ಲಿಯ ಹಿರೇಮಠ ಸಂಸ್ಥಾನ ಸಿದ್ದಗಂಗೆಯ ಮಾದರಿಯಲ್ಲಿ ಬಡವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್, ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಶೋಭಾ ದಿಲೀಪ ಬದೋಲೆ, ದಿಲೀಪ ಬದೋಲೆ, ಲತಾ ನಾಗೇಶ, ನಾಗೇಶ ಸಿ.ಎಂ, ಯುವರಾಜ ಇದ್ದರು. ವಿದ್ಯಾರ್ಥಿನಿ ಭವಾನಿ ವಚನ ಪ್ರಾರ್ಥನೆ ಹಾಡಿದರು.
ಬಾಬು ಬೆಲ್ದಾಳ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.
ಸನ್ಮಾನ :
ಇದೇ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರ ಜನ್ಮದಿನ ಹಿನ್ನೆಲೆಯಲ್ಲಿ ಗುರುಬಸವ ಪಟ್ಟದ್ದೇವರು ಅವರು ಡಾ.ಗಿರೀಶ ಬದೋಲೆ ದಂಪತಿಗಳನ್ನು ಸನ್ಮಾನಿಸಿ, ಆಶೀರ್ವಾದಿಸಿದರು. ಮುಖ್ಯ ಶಿಕ್ಷಕಿ ಸವಿತಾ ಭೂರೆ ತಂಡದವರು ಆರತಿ ಗೀತೆ ನಡೆಸಿ ಕೊಟ್ಟರು.
ಶ್ರೀಮಠದಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಡಾ.ಗಿರೀಶ ಬದೋಲೆ ಅವರು ಬಡ ಮಕ್ಕಳ ಮಧ್ಯೆದಲ್ಲಿ ಜನ್ಮದಿನ ಆಚರಿಸಿಕೊಂಡಿರುವುದು ಶ್ಲಾಘನೀಯ.