ನೀರಿನ ಒತ್ತಡಕ್ಕೆ  ಕಿತ್ತು ಹೋದದಟಿಬಿ ಡ್ಯಾಂನ 19 ನೇ ಗೇಟ್
(ಸಂಜೆವಾಣಿ ಪ್ರತಿನಿಧಿಯಿಂದ)
ಹೊಸಪೇಟೆ ಆ11: ತುಂಗಭದ್ರಾ ಜಲಾಶಯದಲ್ಲಿನ ನೀರಿನ ಒತ್ತಡಕ್ಕೆ ಡ್ಯಾಂನ  ಗೇಟ್‌ ಸಂಖ್ಯೆ 19ರ ಚೈನ್‌ ಲಿಂಕ್‌ ತುಂಡಾಗಿ ಗೇಟ್ ನದಿ ಪಾಲಾಗಿದ್ದು. ಡ್ಯಾಂನಿಂದ  ನೀರು ನದಿಗೆ  ರಭಸವಾಗಿ ನುಗ್ಗುತ್ತಿದೆ.   ನೀರಿನ‌ ಹೊರ ಹರಿವಿನ ಪ್ರಮಾಣ 2ಲಕ್ಷ ಕ್ಯುಸೆಕ್  ಹೊರಹರಿವು ಮಾಡಬೇಕಾಗುತ್ತದೆ ಆದ್ದರಿಂದ ನದಿಪಾತ್ರದ ಜನರ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೈನ್‌ ಲಿಂಕ್‌ ತುಂಡಾದ ಈ ಗೇಟ್‌ನಿಂದಲೇ ಅಂದಾಜು 35 ಸಾವಿರದಿಂದ 40 ಸಾವಿರ ಕ್ಯುಸೆಕ್‌ ನೀರು ನದಿಗೆ ಹೋಗುತ್ತಿದೆ. ಉಳಿದ ಗೇಟ್‌ಗಳಿಂದ 75 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ.
ನೀರಾವರಿ ಇಲಾಖೆಯಉನ್ತತ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದು, ಡ್ಯಾಂನಲ್ಲಿನ ನೀರು ಕಡಿಮೆಯಾದ ಬಳಿಕವಷ್ಟೇ ತುಂಡಾದ ಚೈನ್‌ ಲಿಂಕ್‌ ಮತ್ಸತು ಗೇಟ್ ಸರಿಪಡಿಸಲು  ಸಾಧ್ಯವಾಗುತ್ತದೆ. ದುರಸ್ತಿಗೆ ಅಗತ್ಯವಾಗಿ ಬೇಕಾದ ನೀರು ಕಡಿಮೆಯಾಗಲು ಕನಿಷ್ಠ ಮೂರ್ನಾಲ್ಕು ದಿನವಾದರೂ ಬೇಕು ಎಂದುಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಎಲ್‌. ಬಸವರಾಜ್‌ ತಿಳಿಸಿದ್ದಾರೆ.
ಪ್ರತಿವರ್ಷವೂ ಜಲಾಶಯದ ಗೇಟ್‌ಗಳ ನಿರ್ವಹಣೆ ಮಾಡಲಾಗುತ್ತದೆ. ಜಲಾಶಯದ ಸುರಕ್ಷತೆಗೆ ಯಾವುದೇ ತೊಂದರೆಯಿಲ್ಲ. ಆತಂಕಗೊಳ್ಳುವ ಅಗತ್ಯವೂ ಇಲ್ಲ. ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಈಗಿನ ನೀರಿನಲ್ಲಿ ಆಗಿರುವ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆಯೊ ಇಲ್ಲವೊ ಎನ್ನುವುದನ್ನು ತಜ್ಞರ ತಂಡ ನಿರ್ಧಾರ ಮಾಡಲಿದೆ. ಸದ್ಯ 70 ಸಾವಿರ ಕ್ಯುಸೆಕ್‌ ನೀರು ಹೊರಗಡೆ  ಬಿಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಜಲಾಶಯದ ಸಂಪೂರ್ಣ ಭರ್ತಿಯಾಗಿ ಕಳೆದ ವಾರ ಹತ್ತು ದಿನಗಳಿಂದಲೂ ನೀರು ಹೊರಹೋಗುತ್ತಿತು. 105.788 ಟಿಎಂಸಿ ಅಡಿನೀರು ಸಂಗ್ರಹ  ಸಾಮರ್ಥ್ಯ ಹೊಂದಿದೆ
ಎರಡನೇ ಬಾರಿಗೆ:
ಹಿಂದಿನ ಐದು ವರ್ಷಗಳ ಅವಧಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿ. 2019ರಲ್ಲೂ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಏಕಾಏಕಿ‌ ತುಂಡಾಗಿ ಅಪಾರ ಪ್ರಮಾಣದ ನೀರು ಕಾಲುವೆಗೆ ಹರಿದು ಮುನಿರಾಬಾದ್ ಗ್ರಾಮಕ್ಕೂ ನೀರು ನುಗ್ಗಿತ್ತು.
:ಸಚಿವ ಶಾಸಕರ ಭೇಟಿ:
ಜಲಾಶಯಕ್ಕೆ ಭಾನುವಾರ ಬೆಳಗಿನ ಜಾವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೇಟಿ ನೀಡಿದರು.
ಸಚಿವ ಶಿವರಾಜ್ ತಂಗಡಗಿ ‘19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದಿರುವ ಕಾರಣ  ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸದ್ಯದ ಮಟ್ಟಿಗೆ 60ರಿಂದ 65 ಟಿಎಂಸಿ ಅಡಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. ಕನಿಷ್ಠ 20 ಅಡಿ ನೀರು ಖಾಲಿಯಾದರೆ ಮಾತ್ರ ನಿಖರವಾಗಿ ಸಮಸ್ಯೆ ಏನಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ‌.
‘ಆಣೆಕಟ್ಟು ಕಟ್ಟಿದ ವಿನ್ಯಾಸವನ್ನು ತರಿಸಿಕೊಳ್ಳಲಾಗಿದ್ದು, ನೀರಿನ ರಭಸ ಹೆಚ್ಚಿರುವ ಕಾರಣ ಕೆಳಗಡೆ ಇಳಿದು ಕೆಲಸ ಮಾಡಲು ಆಗುವುದಿಲ್ಲ. ಸದ್ಯಕ್ಕೆ ಒಂದು ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ನೀರು ಹೊರಬಿಡುವ ಪ್ರಮಾಣ 2.50 ಲಕ್ಷ ಕ್ಯುಸೆಕ್‌ ದಾಟಿದರೆ ಮಾತ್ರ ಜನರಿಗೆ ತೊಂದರೆಯಾಗುತ್ತದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ  ಕಡಿಮೆ ಸಮಯದಲ್ಲಿ ಸಮಸ್ಯೆ ಪರಿಹರಿಸಲು ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಬರಲಿದೆ. ಬಳಿಕ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.