ಸಿಎಂ ಅರಿವಿದ್ದೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.11: ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವುದು ಸರ್ಕಾರದ ಭೂಮಿ. ಮುಖ್ಯಮಂತ್ರಿ ಮೂಗಿನ ನೇರಕ್ಕೆ ಅರಿವಿಗೆ ಬಂದೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬಿಜೆಪಿ, ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾನೂನು ಬಾಹಿರವಾಗಿ ಸೈಟ್ ಪಡೆದ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇವೆ. ಅರಿಶಿಣ ಕುಂಕುಮ ರೀತಿ ಭೂಮಿದಾನ ಮಾಡಿದ್ದು ತಪ್ಪಾ ಎಂದಿದ್ದಾರೆ. ಕಾನೂನು ಬದ್ಧವಾಗಿ ಭೂಮಿ ಕೊಟ್ಟಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ ಎಂದ ಅವರು, ಈಗಲೂ ನಾನು 14 ನಿವೇಶನ ಮರಳಿಸಲು ಸಿದ್ಧ ಎಂದಿದ್ದಾರಂತೆ. ನಿವೇಶನ ಹಿಂದಿರುಗಿಸಿದರೆ ಕಾನೂನುಬಾಹಿರ ಚಟುವಟಿಕೆ ಮುಚ್ಚಲು ಸಾಧ್ಯವೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಈ ಸರ್ಕಾರ ಸರಿ ಹೋಗಬೇಕು. ಇಲ್ಲದಿದ್ದರೆ ಪತನಗೊಳಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಖಾಕಿ ಚಡ್ಡಿ ಹಾಕಿದ್ದಾರೆಂದು ನನ್ನ ಬಗ್ಗೆ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಡ್ಡಿ ಎಲ್ಲವೂ ಕಪ್ಪು ಮಾಡಿಕೊಂಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಸಿದ್ದರಾಮಯ್ಯ ಪತ್ನಿ ಬಗ್ಗೆ ನಾವು ಎಂದೂ ಮಾತನಾಡಿಲ್ಲ. ಸಿಎಂ ಪತ್ನಿ ಪ್ರಮಾಣವಚನಕ್ಕೆ ಬಂದಿದ್ದರೋ, ಬಿಟ್ಟರೋ ಗೊತ್ತಿಲ್ಲ. ನೀವು ಕಾನೂನಾತ್ಮಕಾವಾಗಿ ಎಷ್ಟು ಸೈಟ್ ಬೇಕಾದರೂ ತೆಗೆದುಕೊಳ್ಳಿ. ನಿಮ್ಮ ಧರ್ಮಪತ್ನಿ ಬಗ್ಗೆ ನಮಗೆ ಗೌರವವಿದೆ. ಕಾನೂನು ಬಾಹಿರವಾಗಿ ಮಾಡಿರೋ ಹಗರಣದ ಬಗ್ಗೆ ಮಾತನಾಡಿ. ಸಿಎಂ ಧರ್ಮಪತ್ನಿಗೆ ಅವರ ಅಣ್ಣ ಭೂಮಿ ದಾನಮಾಡಿರೋದು ಅಂತಾರೆ, ದಾನ ಮಾಡೋದು ತಪ್ಪ ಅಂತಾರೆ ಡಿಕೆಶಿ. ಆ ಭೂಮಿ ನಿಂಗಂದ್ದೂ ಅಲ್ಲ ಯಾರದ್ದೂ ಅಲ್ಲ, ಸರ್ಕಾರದ್ದು. ಮುಡಾ ಭೂಮಿ ಖರೀದಿಸಲು ಹೇಗೆ ಸಾಧ್ಯ.? ನೀವು ಪಡೆದ ಭೂಮಿ ಸರ್ಕಾರದ್ದು. ಡಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೋ ಇಲ್ಲವೋ . ನೀವು ಸಹಿ ಹಾಕದೇ ಇರಬಹುದು ಸಿದ್ದರಾಮಯ್ಯನವರೇ. ಆದರೆ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ಗೆದ್ದಿದ್ದು, ಸಿದ್ದರಾಮಯ್ಯ ಅವರಿಗೆ ಕಲ್ಲುಬಂಡೆಯಾಗಿ ನಿಂತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೇ ರೀತಿ ಈ ಹಿಂದೆ ನನಗೂ ಶಿವಕುಮಾರ್ ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನವರು 9ನೇ ಸ್ಥಾನವನ್ನು ಹೇಗೆ ಗೆದ್ದಿದ್ದಾರೆ ಗೊತ್ತಿದೆ. ಅದಕ್ಕೆ ನಾನು 8 ಸ್ಥಾನ ಗೆದ್ದಿದ್ದಾರೆ ಎಂದು ಹೇಳುತ್ತೇನೆ ಎಂದು ಸೂಚ್ಯವಾಗಿ ತಿಳಿಸಿದರು.
ನನ್ನ ಕಂಡರೆ ಹೊಟ್ಟೆಉರಿ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಆಡಳಿತ ನೀಡಿದರೆ ನಮಗೆ ಯಾಕೆ ಹೊಟ್ಟೆಉರಿ. ನನ್ನ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲವೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಲ್ಲ, ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.
ನನ್ನ ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ. ಶ್ರಮಪಟ್ಟು 105 ಸ್ಥಾನವನ್ನು ಯಡಿಯೂರಪ್ಪ ಪಡೆದಿದ್ದಾಗ ಅಧಿಕಾರ ಸಿಗದ ಸಂದರ್ಭದಲ್ಲಿ ರಾಜಕೀಯವಾಗಿ ನನ್ನ ವಿರುದ್ದ ಯಡಿಯೂರಪ್ಪ ಮಾತಾಡಿದ್ದಾರೆ, ಅದು ಸಹಜ. ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ಅವರು ನನ್ನ ನಾಗರಹಾವು ಅಂದರು. ನಾನು ಡಿ.ಕೆ. ಶಿವಕುಮಾರ್ ಪಾಲಿಗೆ ನಾಗರಹಾವೇ. ಲೂಟಿ ಮಾಡುವ ಡಿ.ಕೆ ಶಿವಕುಮಾರ್ ಗೆ ನಾನು ನಾಗರಹಾವು ಎಂದು ಗುಡುಗಿದರು.
ಬಂಡೆ ಕಲ್ಲು ನಂಬಿಕೊಂಡೆ, ಮೈಮೇಲೆ ಎಳೆದುಕೊಂಡೆ: ಸಿದ್ದರಾಮಯ್ಯ ಪರ ನಾನು ಬಂಡೆ ಥರ ಇದ್ದಿನಿ ಅಂದಿದ್ದಾರೆ ಡಿ.ಕೆ. ಶಿವಕುಮಾರ್. 2018ರಲ್ಲಿ ನಾನು ಆ ಬಂಡೆ ಕಲ್ಲು ನಂಬಿಕೊಂಡೆ ಬಂಡೆಯನ್ನು ಮೈ ಮೇಲೆ ಎಳೆದುಕೊಂಡೆ ಎಂದು ಲೇವಡಿ ಮಾಡಿದರು.