ತಾಲೂಕು ಕಚೇರಿ ಅವ್ಯವಸ್ಥೆ: ಕೃಷ್ಣಬೈರೇಗೌಡ ಗರಂ
ಚನ್ನಪಟ್ಟಣ.ಆ.೧೧- ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡುವ ಮೂಲಕ ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕರ ಮುಂದೆಯೇ ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಹಾಕಿ ಅಧಿಕಾರಿಗಳ ಚಳಿ ಬಿಡಿಸಿದರು.
ಕಂದಾಯ ಇಲಾಖೆಯಲ್ಲಿನ ಭ್ರ?ಚಾರ ಹಾಗೂ ಅಧಿಕಾರಿಗಳು ಕೆಲಸ ಮಾಡದೆ ಅಲೆಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ್ದ ದೂರಿನ ಮೇರೆಗೆ ಯಾವುದೇ ಮಾಹಿತಿ ನೀಡದೆ ಸಾಮಾನ್ಯರಂತೆ ತಾಲೂಕು ಕಚೇರಿಗೆ ಆಗಮಿಸಿದ ಕೃಷ್ಣ ಬೈರೇಗೌಡರು, ಸಾರ್ವಜನಿಕರು ಅರ್ಜಿ ನೀಡುವ ಟಪಾಲು ವಿಭಾಗದಿಂದ ಪೋಡಿ, ಪಹಣಿ ವಿಭಾಗದವರೆಗೆ ಹಾಗೂ ಸರ್ವೇ ಇಲಾಖೆ ಮತ್ತು ರೆಕಾರ್ಡ್ ರೂಂನಲ್ಲಿ ಓಡಾಡಿ ಎಲ್ಲವನ್ನು ಪರಿಶೀಲಿಸಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ಜನರು ನಿಮ್ಮನ್ನು ನಂಬಿ ಬರುತ್ತಾರೆ. ಆದರೆ ನೀವು ಜನರು ನಿಮ್ಮ ಮನೆ ಕಾಯುವವರು ಜನರು ನಮಗಾಗಿಯೇ ಇದ್ದಾರೆ ಎಂಬಂತೆ ವರ್ಷನುಗಟ್ಟಲೆ ಕಳೆದರೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ಅಲೆಸುತ್ತಿದ್ದೀರಾ ಎಂದು ಕೃಷ್ಣಬೈರೇಗೌಡರು ನಯವಾದ ಮಾತುಗಳಿಂದಲೇ ಅಧಿಕಾರಿಗಳಿಗೆ ಮುಜುಗರ ಆಗುವಂತೆ ಚಾಟಿ ಬೀಸಿದರು
ಆರಂಭದಲ್ಲೇ ಠಪಾಲು ವಿಭಾಗಕ್ಕೆ ತೆರಳಿ ಪರಿಶೀಲನೆ ಮಾಡಿದ ಸಚಿವ ಕೃ?ಬೈರೇಗೌಡರು ಠಪಾಲಿಗೆ ಬಂದಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಕಡತ ಪರಿಶೀಲನೆ ಮಾಡಿದರು. ಈ ವೇಳೆ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಅರ್ಜಿಯನ್ನು ಮುಂದಿನ ವಿಭಾಗಕ್ಕೆ ರವಾನೆ ಮಾಡದೆ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ಪಡೆದರು. ಜೊತೆಗೆ ಒಂದೇ ದಿನ ಸಲ್ಲಿಸಿರುವ ಅರ್ಜಿಗಳಲ್ಲಿ ಕೆಲವನ್ನು ಮಾತ್ರ ಅಂದೇ ವಿಲೇವಾರಿ ಮಾಡಿದ್ದು ಉಳಿದ ಅರ್ಜಿಯನ್ನು ಏಕೆ ವಿಲೇವಾರಿ ಮಾಡಿಲ್ಲ ಎಂದು ತಹಸೀಲ್ದಾರ್ ನರಸಿಂಹಮೂರ್ತಿ ಅವರನ್ನು ತರಾಟೆಗೆ ಪಡೆದರು. ಈ ಪ್ರಶ್ನೆಗೆ ಉತ್ತರಿಸಲಾಗಿದೆ ತಹಸೀಲ್ದಾರ್ ತಬ್ಬಿಬ್ಬಾದರು.
ಇದೇ ವೇಳೆ ಭೂ-ದಾಖಲೆ ಮತ್ತು ಸರ್ವೇ ವಿಭಾಗಕ್ಕೆ ಭೇಟಿ ನೀಡಿದ ಕೃಷ್ಣ ಬೈರೇಗೌಡರು ಈ ವೇಳೆ ದಾಖಲೆಗಾಗಿ ಬಂದಿದ್ದ ೭೫ರ ಹಿರಿಯರನ್ನು ಪ್ರಶ್ನೆ ಮಾಡಿ ನಿಮಗೆ ಏನು ಕೆಲಸ ಆಗಬೇಕಿದೆ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಹಿರಿಯರು ತಾನು ೮ ವರ್ಷಗಳಿಂದ ದಾಖಲೆಗಾಗಿ ಅಲೆಯುತ್ತಿದ್ದೇನೆ ಇನ್ನು ನೀಡಿಲ್ಲ ಎಂದು ಅಳಲನ್ನು ತೋಡಿಕೊಂಡರು. ಈ ವೇಳೆ ಸಚಿವರು ಹಿರಿಯರಿಂದಲೇ ಎಡಿಎಲ್‌ಆರ್ ಅವರನ್ನು ಪ್ರಶ್ನೆ ಮಾಡಿಸಿ ನಾನು ಸಾಯುವ ವೇಳೆಗೆ ನನ್ನ ಕೆಲಸ ಮಾಡಿಕೊಡಿ ಸಾರ್ ಎಂದು ಕೈ ಮುಗಿಸಿ ಇವರು ಸಾಯುವ ಒಳಗೆ ಇವರ ಕೆಲಸ ಮಾಡಿಕೊಡುವಿರಾ ಎಂದು ಎಡಿಎಲ್‌ಆರ್ ಅವರನ್ನು ಪ್ರಶ್ನೆಮಾಡಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣವಾಗಿ ಕ್ರಮ
ಕಚೇರಿಯ ಅವ್ಯವಸ್ಥೆ, ಅಧಿಕಾರಿಗಳ ಕಾರ್ಯವೈಖರಿ ಗಮನಿಸಿದ ಬಳಿಕ ಮಾಧ್ಯಮಗೊಂದಿಗೆ ಮಾತನಾಡಿದ ಕೃಷ್ಣಬೈರೇಗೌಡರು ತಾಲೂಕು ಕಚೇರಿಯಲ್ಲಿ ಅವ್ಯವಸ್ಥೆ ಮತ್ತು ಅಧಿಕಾರಿಗಳ ಕಾರ್ಯವೈಖರಿ ಬೇಸರ ತರಿಸಿದೆ. ಇವರಿಗೆ ಎಷ್ಟು ಹೇಳಿದರೂ ಏನೂ ಆಗುವುದಿಲ್ಲ ಎನಿಸುತ್ತಿದೆ. ಸಾರ್ವಜನಿಕರಿಗೆ ಎಲ್ಲಾ ಅನುಕೂಲ ಮಾಡಿಕೊಡಬೇಕು, ಸರ್ಕಾರವನ್ನೇ ರೈತರ ಮನೆ ಬಾಗಿಲಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ತಾಲೂಕು ಕಚೇರಿ ಮತ್ತು ಸರ್ವೇ ಇಲಾಖೆಯಲ್ಲಿನ ಅಧಿಕಾರಿಗಳ ಕಾರ್ಯವೈಖರಿ ನೋಡಿದರೆ ಸಾರ್ವಜನಿಕರು ಸರ್ಕಾರದ ವಿರುದ್ಧ ಆರೋಪ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ನನಗೆ ಮುಖ್ಯಮಂತ್ರಿಗಳು ಜವಾಬ್ದಾರಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣವಾಗಿ ಕ್ರಮ ಕೈಗೊಂಡು ಸಾರ್ವಜನಿಕರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.