ಬಿಜೆಪಿ ಪಾಪದ ಯಾತ್ರೆ ಅಂತ್ಯಗೊಂಡಿದೆ: ಲಕ್ಷ್ಮಣ್
ಸಂಜೆವಾಣಿ ನ್ಯೂಸ್
ಮೈಸೂರು: ಆ.11: ಬಿಜೆಪಿಯವರ ಪಾಪದ ಯಾತ್ರೆ ಇಂದು ಅಂತ್ಯಗೊಂಡಿದೆ. ಬಿಜೆಪಿಯವರ ಮೈ ಮೇಲೆ ಅಂಟಿದ್ದ ಕೊಳೆಯನ್ನ ಇಂದು ತೊಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.
ಮುಡಾ ಹಗರಣ ವಿರೋಧಿಸಿ ಬಿಜೆಪಿ, ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆ ಇಂದು ಮೈಸೂರಿನಲ್ಲಿ ಅಂತ್ಯಗೊಂಡಿದ್ದು, ಈ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಈಗ ಬಿಎಸ್ ವೈ ವಿರುದ್ದ ಪೆÇಕ್ಸೋ ಪ್ರಕರಣ ದಾಖಲಾಗಿದೆ. ಹೈಕಮಾಂಡ್ ಕೃಪಾಕಟಾಕ್ಷದೊಂದಿಗೆ ಇಂದು ಬಿಎಸ್ ವೈ ಬೇಲ್ ಮೇಲೆ ಹೊರಗಿದ್ದಾರೆ. ವಿಜಯೇಂದ್ರ ತಮ್ಮ ತಂದೆ ಜೈಲಿಗೆ ಹೋಗಲಿಕ್ಕೆ ಕಾರಣ ಯಾರು ಎಂಬುದನ್ನ ಹೇಳಬೇಕು. ಯಡಿಯೂರಪ್ಪ ಸಹಿಯನ್ನ ನಕಲು ಮಾಡಿದ್ದು ಯಾರು. ವಿಜಯೇಂದ್ರ ಇದಕ್ಕೆಲ್ಲ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಅಶೋಕ್ ರವರು ಸಿಎಂ ಜಮೀನಿನ ಬೆಲೆ ಬಗ್ಗೆ ಮಾತನಾಡಿದ್ದಾರೆ. ಅಶೋಕ್ ರವರೇ ಬ್ರೇನ್ ಗೂ ನಾಲಿಗೆಗೂ ಸಂಬಂಧವಿಲ್ಲದೆ ಮಾತನಾಡುತ್ತೀರಾ. ಅಂದು ಖರೀದಿ ಮಾಡಿದ ಆಸ್ತಿ ಬೆಲೆ ಇಂದು ಹೆಚ್ಚಾಗಿದೆ. ಬೆಲೆ ಹೆಚ್ಚಾಗಬಾರದು ಅಂತ ಇದೆಯಾ. ಹಾಗಾದರೇ ನಿಮ್ಮ ಅಫಿಡವಿಟ್ ನಲ್ಲಿ ಘೋಷಣೆ ಮಾಡಿಕೊಂಡಿರುವ ಆಸ್ತಿ ಎಷ್ಟು. ನಿಮ್ಮ ಬಳಿ ಇರುವ ಆಸ್ತಿ ಎಷ್ಟು ತಿಳಿಸಿ. ವಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳಲಿಕ್ಕೆ ಸಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀರಾ. ವಿಪಕ್ಷ ನಾಯಕನ ಸ್ಥಾನಕ್ಕೆ ತಕ್ಕಂತೆ ಯಾವತ್ತಾದರೂ ನಡೆದುಕೊಂಡಿದ್ದೀರಾ ಎಂದು ಕಿಡಿಕಾರಿದರು.
ರಾಧಾ ಮೋಹನ್ ದಾಸ್ ಬಿಜೆಪಿ ನಾಯಕರು ಹೇಳಿಕೊಟ್ಟಿದ್ದನ್ನ ಹೇಳಿದ್ದಾರೆ. ನಿಮಗೆ ರಾಜ್ಯದ ಬಗ್ಗೆ ಏನಾದರು ಮಾಹಿತಿ ಇದಿಯಾ? ನಾಲ್ಕು ವರ್ಷದ ಅವಧಿಯಲ್ಲಿ 2 ಲಕ್ಷ ಕೋಟಿ ಹಗರಣ ಮಾಡಿರೋದರ ಬಗ್ಗೆ ನಿಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಅಮಿತ್ ಶಾ ಅವರ ಆಸ್ತಿ 6300 ಕೋಟಿ ಆಗಿದ್ದು ಹೇಗೆ ಎಂಬುದನ್ನ ತಿಳಿಸಿ. ಭ್ರಷ್ಟಾಚಾರದ ಪಿತಾಮಹ ಬಿಜೆಪಿಯವರೇ. ಪ್ರಹ್ಲಾದ್ ಜೋಶಿ ಸುಳ್ಳು ಹೇಳೋದರಲ್ಲಿ ನಿಸ್ಸಿಮರಾಗಿದ್ದಾರೆ. ಸಿದ್ದರಾಮಯ್ಯರ ಬಗ್ಗೆ ಮಾತನಾಡೋ ನೈತಿಕತೆ ನಿಮಗೆ ಇದಿಯಾ. ಕೆಲ ದಲಿತ ಮುಖಂಡರ ಬಗ್ಗೆ ಸಮಾವೇಶದಲ್ಲಿ ಮಾತನಾಡಿಸಿದ್ದೀರಾ. ಎಸ್ ಸಿಪಿ, ಟಿಎಸ್ಪಿ ಕಾಯ್ದೆ ಬಗ್ಗೆ ಇವರಿಗೇನಾದರೂ ತಿಳಿದಿದೀಯಾ? ಎಸ್ಸಿಪಿ ಟಿಎಸ್ಪಿ ಯೋಜನೆ ಜಾರಿ ಮಾಡಿದ್ದೆ ನಾವು ಎಂದು ಕುಟುಕಿದರು.
ನಾವು ಮಾಡಿಸಿದ್ದ ಪುಸ್ತಕವನ್ನೇ ಕಾಪಿ ಮಾಡಿದ್ದೀರಾ?ಮುಡಾದಲ್ಲಿ ಸಿಎಂ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಪುಸ್ತಕ ಬಿಡುಗಡೆ ಮಾಡಲಾಗಿದೆ. ನಾವು ಮಾಡಿಸಿದ್ದ ಪುಸ್ತಕವನ್ನೇ ಕಾಪಿ ಮಾಡಿದ್ದೀರಾ. ಈ ಪುಸ್ತಕದಲ್ಲಿ 5ಸಾವಿರ ಸೈಟ್ ಎಲ್ಲಿದ್ದಾವೆ ತಿಳಿಸಿ. ನಮ್ಮ ಸರ್ಕಾರ ಬಂದಾಗ ತನಿಖೆ ಮಾಡಲಿಕ್ಕೆ ಮುಂದಾಗಿದ್ದೇವೆ. ಮುಡಾದಲ್ಲಿ ಹೆಚ್ಚು ಅಕ್ರಮ ನಿವೇಶನ ಪಡೆದಿರೋದು ಬಿಜೆಪಿ, ಜೆಡಿಎಸ್ ನವರೇ. ದಾಖಲೆಗಳಿಲ್ಲದೆ ನಿವೇಶನ ಹಂಚಿಕೆ ಮಾಡೋದು ಹಗರಣ. ಈಗಿರುವಾಗ ಇಲ್ಲಿ ಸಿಎಂ ಅವರ ಹಗರಣ ಮಾಡಿರೋದು ಎಲ್ಲಿದೆ. ಸುಳ್ಳು ಹೇಳಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದೀರಾ ಎಂದು ಗುಡುಗಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸೇರಿ ಅನೇಕರಿದ್ದರು.