ರಾಜಕೀಯ ಆರೋಪ- ಪ್ರತ್ಯಾರೋಪಕ್ಕೆ ಸಾಕ್ಷಿಯಾದ ಮೈಸೂರು
ಸಂಜೆವಾಣಿ ನ್ಯೂಸ್
ಮೈಸೂರು: ಆ.11: ರಾಜ್ಯ ರಾಜಕೀಯ ಪಕ್ಷಗಳ ನಡುವಿನ ನೈತಿಕತೆ ಪ್ರಶ್ನಿಸುವ ಹೋರಾಟದ ಭಾಗವಾಗಿ ರೂಪುಗೊಂಡ ಕಾಂಗ್ರೆಸ್ ಪಕ್ಷದ ಜನಾಂದೋಲನ ಸಮಾವೇಶ ಹಾಗೂ ಬಿಜೆಪಿ, ಜೆಡಿಎಸ್ ದೋಸ್ತಿ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದ ಮುಕ್ತಾಯದೊಂದಿಗೆ ಬೃಹತ್ ರಾಜಕೀಯ ಕೆಸರೆರಾಚಾಟಕ್ಕೆ ಮೈಸೂರು ವೇದಿಕೆಯಾಯಿತು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಗುಟುರು ಹಾಕಿದ್ದ ಜಾಗದಲ್ಲೇ, ಅದೇ ವೇದಿಕೆಯಲ್ಲೇ ಶನಿವಾರ ಬಿಜೆಪಿ, ಜೆಡಿಎಸ್ ದೋಸ್ತಿ ಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ಭಾಣ ಬಿಟ್ಟರು.
ಕಾಂಗ್ರೆಸ್ ಪಕ್ಷದ ಪ್ರಮುಖರು ಕುಮಾರಸ್ವಾಮಿ, ವಿಜಯೇಂದ್ರ, ಯಡಿಯೂರಪ್ಪ, ಅಶೋಕ್ ವಿರುದ್ಧ ಹರಿಹಾಯ್ದರೆ, ಬಿಜೆಪಿ, ಜೆಡಿಎಸ್ ಮುಖಂಡರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು. ಈ ಮೂಲಕ ಏಟಿಗೆ ಎದಿರೇಟು ಎಂಬ ಸಂದೇಶವನ್ನು ಸಾರಿದರು. ಇದಕ್ಕೆ ನೆರೆದಿದ್ದ ಸಹಸ್ರಾರು ಮಂದಿ ಸಾಕ್ಷಿಯಾದರು.
ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಸೆಟೆದು ನಿಂತ ವಿಪಕ್ಷಗಳ ಮುಖಂಡರು ಐಕ್ಯತೆ ಹಾಗೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.
ಸಮಾರೋಪ ಸಮಾವೇಶದಲ್ಲಿ ಪಾಲ್ಗೊಂಡ ಎರಡೂ ಪಕ್ಷಗಳ ನಾಯಕರು, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಸತತ ನಾಲ್ಕೂವರೆ ಗಂಟೆಗಳ ಕಾಲ ಒಬ್ಬರಾದ ನಂತರ ಮತ್ತೊಬ್ಬರು ತೀವ್ರವಾಗಿ ಹರಿಹಾಯ್ದರು.
ತಮ್ಮ ಮಾತಿನುದ್ದಕ್ಕೂ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಮಾತನಾಡಿ ಕಿಡಿಕಾರಿದರು.
“5000 ನಿವೇಶನಗಳನ್ನು ನುಂಗಿದ ಆ 14 ನಿವೇಶನಗಳು” ಎಂಬ ಪುಸ್ತಕವನ್ನು ದೋಸ್ತಿ ನಾಯಕರು ಬಿಡುಗಡೆ ಮಾಡುವ ಮುಖೇನ, ಕಾಂಗ್ರೆಸ್ ಪಕ್ಷ ಶುಕ್ರವಾರ ತನ್ನ ಜನಾಂದೋಲನ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದ ಪುಸ್ತಕಕ್ಕೆ ಸಡ್ಡು ಹೊಡೆದರು.
ವೇದಿಕೆಯಲ್ಲಿ ಎರಡೂ ದೋಸ್ತಿ ಪಕ್ಷಗಳ ನಾಯಕರು ಸಮಾನಾಂತರವಾಗಿ ಕೂರುವ ಮೂಲಕ ಪರಸ್ಪರ ಗೌರವ, ವಿಶ್ವಾಸ ಹಂಚಿಕೊಂಡಿದ್ದುದು ಕಂಡುಬಂತು.
ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರತಿಯೊಬ್ಬರೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನೇ ಗುರಿಯಾಗಿಸಿಕೊಂಡು ಮಾತನಾಡಿದರು. ಯಡಿಯೂರಪ್ಪ ಅವರ ಪರ ಗಟ್ಟಿ ದನಿಯಲ್ಲಿ ಮಾತನಾಡಿದ ನಾಯಕರು ಕೊನೆಯವರೆಗೂ ತಮ್ಮ ನಾಯಕನ ಪರ ನಿಂತೇ ತೀರುವುದಾಗಿ ಮಾತನಾಡಿದಂತಿತ್ತು. ಮಾತ್ರವಲ್ಲ, ಈ ಮೂಲಕ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.
ಭಾಷಣ ಮಾಡಿದ ಪ್ರತಿಯೊಬ್ಬರೂ ಮುಡಾ ಹಗರಣವನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಮಾತನಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರಲ್ಲದೆ, ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿಯುವವರೆಗೂ ಹಾಗೂ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ ಎಂದ ಸಂದೇಶ ಸಾರಿದರು.
ವೇದಿಕೆಯಲ್ಲಿ ಎರಡೂ ಪಕ್ಷಗಳ ಪ್ರಮುಖರಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿ.ಟಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ರಾಜೂಗೌಡ, ಪ್ರಹ್ಲಾದ್ ಜೋಷಿ, ಸದಾನಂದಗೌಡ, ಶ್ರೀರಾಮುಲು, ಬೈರತಿ ಬಸವರಾಜು, ಡಾ.ಅಶ್ವಥ್ ನಾರಾಯಣ್, ಮುನಿರಾಜು, ಕುಡುಚಿ ಪಿ. ರಾಜೀವ್, ಶ್ರೀಕಂಠೇಗೌಡ, ಸಾರಾ ಮಹೇಶ್, ಬಂಡೆಪ್ಪ ಕಾಶಂಪುರ್, ಹರೀಶ್ ಗೌಡ, ಬಾಲಕೃಷ್ಣ, ಅರವಿಂದ ಬೆಲ್ಲದ್, ಶ್ರೀವತ್ಸ, ಸೊಗಡು ಶಿವಣ್ಣ, ಪ್ರತಾಪ್ ಸಿಂಹ, ಎನ್. ಮಹೇಶ್, ತಮ್ಮಣ್ಣಗೌಡ, ಭೋಜೇಗೌಡ, ಆರ್.ಅಶೋಕ, ರಾಧಾ ಮೋಹನ್ ಆಳ್ವಾ, ಛಲವಾದಿ ನಾರಾಯಣ ಸ್ವಾಮಿ, ಬಿ.ಸಿ.ಪಾಟೀಲ್, ಎ. ಮಂಜು, ಎಚ್.ಕೆ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಸಿ.ಎಸ್.ಪುಟ್ಟರಾಜು, ಸುರೇಶ್ ಬಾಬು, ಶರವಣ, ಸಿ.ಟಿ. ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.