ಕಳಪೆ ಕಾಮಗಾರಿ: ನಾಳೆ ನೀರಾವರಿ ಕಚೇರಿ ಮುಂದೆ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.11: ತಾಲೂಕು ವ್ಯಾಪ್ತಿಯಲ್ಲಿರುವ ಹೇಮಾವತಿ ಎಡದಂಡೆ ನಾಲೆಯ 54 ನೇ ವಿತರಣಾ ನಾಲೆಯ ಕಳಪೆ ಕಾಮಗಾರಿ ಮತ್ತು ನೀರಾವರಿ ಇಲಾಖೆಯಲ್ಲಿ ನಡೆಯುತ್ತಿರುವ ಇತರ ಅಕ್ರಮಗಳ ವಿರುದ್ದ ತಾಲೂಕು ರೈತಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಂಟಿ ಹೋರಾಟವನ್ನು ಆರಂಭಿಸಿದ್ದು ಆಗಸ್ಟ್ 12 ರ ಸೋಮವಾರ ಪಟ್ಟಣದ ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯ ಮುಂದೆ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿವೆ ಎಂದು ಜಿಲ್ಲಾ ರೈತಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ವಿ.ರಾಜೇಗೌಡ ಮತ್ತು ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಕುರಿತು ರಾಜ್ಯ ರೈತಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಪಟ್ಟಣದ ಹೇಮಾವತಿ ಎಡದಂಡೆ ನಾಲಾ ವಿಭಾಗ ನಂ.03 ಕಾರ್ಯಪಾಲಕ ಅಭಿಯಂತರರು ಹಾಗೂ ಪಟ್ಟಣ ಪೆÇಲೀಸರಿಗೆ ಲಿಖಿತ ಮಾಹಿತಿ ನೀಡಲಾಗಿದ್ದು ಸೋಮವಾರ ಬೆಳಿಗ್ಗೆ 11 ಘಂಟೆಯಿಂದ ಚಳುವಳಿ ಆರಂಭವಾಗಲಿದೆ ಎಂದು ಎಂ.ವಿ.ರಾಜೇಗೌಡ ಮತ್ತು ಡಿ.ಎಸ್.ವೇಣು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
54 ನೇ ವಿತರಣಾ ನಾಲೆಯ ಆಧುನೀಕರಣ ಕಾಮಗಾರಿ ಈ ಭಾಗದ ರೈತ ಹೋರಾಟಗಾರರ ದಶಕಗಳ ಹೋರಾಟದ ಫಲವಾಗಿ ಆರಂಭಗೊಂಡಿದೆ. 55 ಕೋಟಿ ರೂಗಳ ಈ ಕಾಮಗಾರಿ ನಿಯಮಾನುಸಾರ ನಡೆಯುತ್ತಿಲ್ಲ. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರುಗಳು ಪರಸ್ಪರ ಶಾಮೀಲಾಗಿ ಕಳಪೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕಳಪೆ ಕಾಮಗಾರಿಯ ವಿರುದ್ದ ಆರಂಭದಲ್ಲಿಯೇ ಎಚ್ಚೆತ್ತುಕೊಂಡಿರುವ ರೈತರು ಗುಣಮಟ್ಟದ ಕಾಮಗಾರಿಗೆ ಆಗ್ರಹಿಸುತ್ತಿದ್ದು ರೈತರ ಹೋರಾಟಕ್ಕೆ ರಾಜ್ಯ ರೈತಸಂಘ ಮತ್ತು ಕರವೇ ಧ್ವನಿಯಾಗಿದ್ದು ಸಂಯುಕ್ತ ಹೋರಾಟಕ್ಕೆ ಮುಂದಾಗಿವೆ. ಗುತ್ತಿಗೆದಾರ ಸ್ಥಳೀಯನಾಗಿದ್ದು ತನ್ನ ಬೆಂಬಲಿಗರ ಮೂಲಕ ರೈತ ಚಳುವಳಿಗೆ ಬೆದರಿಕೆ ಹಾಕಿಸುತ್ತಿದ್ದಾನೆ. ಯಾವುದೇ ಬೆದರಿಕೆಗಳಿಗೆ ರೈತಸಂಘವಾಗಲಿ ಕರ್ನಾಟಕ ರಕ್ಷಣಾ ವೇದಿಕೆಯಾಗಲಿ ಮಣಿಯುವುದಿಲ್ಲ. ನಮ್ಮ ಹೋರಾಟ ಕಾಮಗಾರಿಯ ವಿರುದ್ದವಲ್ಲ. ಬದಲಾಗಿ ಗುಣಮಟ್ಟದ ಕಾಮಗಾರಿಗಾಗಿ. ಗುತ್ತಿಗೆದಾರ ಮತ್ತು ಎಂಜಿನಿಯರುಗಳು ತಮ್ಮ ಸ್ವಹಿತಕ್ಕಾಗಿ ರೈತ ಸಮುದಾಯವನ್ನು ಬಲಿಕೊಡುತ್ತಿದ್ದು ಯಾವುದೇ ಕಾರಣಕ್ಕೂ ನಾವುಗಳು ಕಳಪೆ ಕಾಮಗಾರಿಗೆ ಆಸ್ಪದ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ನೀರು ಬಿಟ್ಟಿರುವಾಗ ಹೂಳೆತ್ತುವ ಕಾಮಗಾರಿ:- ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಹೇಮಾವತಿ ಜಲಾಶಯ ತುಂಬಿದೆ. ಇದರ ಪರಿಣಾಮ ನೀರಾವರಿ ಇಲಾಖೆ ಈಗಾಗಲೇ ತಾಲೂಕಿನ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನಾಲೆಗಳಿಗೆ ಹೇಮಾವತಿ ನದಿಯಿಂದ ನೀರು ಹರಿಸುತ್ತಿದೆ. ಕಾಲುವೆಗಳಲ್ಲಿ ನೀರು ಹರಿಯುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು ಭತ್ತದ ಒಟ್ಟಲು ಹಾಕುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವಾಗ ನೀರಾವರಿ ಇಲಾಖೆ ಹಣ ಮಂಜೂರಾಗಿದೆ ಎಂದು ಹೇಳಿ ನೀರು ಹರಿಯುತ್ತಿರುವ ನಾಲೆಗಳ ಹೂಳೆತ್ತುವ ಕಾಮಗಾರಿಗೆ ಮುಂದಾಗಿದೆ. ಹೂಳೆತ್ತುವ ನೆಪದಲ್ಲಿ ಕಾಲುವೆಗಳಲ್ಲಿ ಹರಿಸುತ್ತಿರುವ ನೀರು ನಿಲ್ಲಿಸುವುದಕ್ಕೆ ರೈತರ ವಿರೋಧವಿದೆ. ಹೂಳೆತ್ತುವ ನೆಪದಲ್ಲಿ ಗುತ್ತಿಗೆದಾರ ಮತ್ತು ಇಂಜಿನಿಯರ್ ಪರಸ್ಪರ ಶಾಮೀಲಾಗಿ ಸರ್ಕಾರಿ ಹಣವನ್ನು ದೋಚಲು ಮುಂದಾಗಿದ್ದಾರೆ. ಇದರ ವಿರುದ್ದವೂ ಸೋಮವಾರ ಹೋರಾಟ ನಡೆಯಲಿದೆ ಎಂದಿರುವ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಹೋಳೆತ್ತುವ ಕಾಮಗಾರಿಗೆ ಮಂಜೂರಾಗಿರುವ ಹಣವನ್ನು ಮೀಸಲಿಟ್ಟು ಬೇಸಿಗೆ ಕಾಲದಲ್ಲಿ ನಾಲೆಗಳ ಹೂಳೆತ್ತುವಂತೆ ಸೂಚಿಸಿದ್ದಾರೆ.