ಮಳೆ ನೀರಿಗೆ ಕೆರೆಯಂತಾದ ಬಸ್ ನಿಲ್ದಾಣ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.11: ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಮಳೆ ನೀರು ತುಂಬಿಕೊಂಡು ಕೆರೆಯಂತಾಗಿದೆ.
ಸಂಜೆ ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಸುರಿದ ಬಾರಿ ಮಳೆಯಿಂದ ಬಸ್ ನಿಲ್ದಾಣ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಬಸ್ಸುಗಳು ಒಳಗಡೆ ಹೋಗಲಾಗದೆ ಮುಖ್ಯ ರಸ್ತೆಯಲ್ಲೇ ಜನರನ್ನು ಇಳಿಸಿ ವಾಪಸ್ ತೆರಳಿದವು ಇದರಿಂದ ಜನರು ಬಸ್ ಹತ್ತಲು ಇಳಿಯಲು ಪರದಾಡುವಂತಾಯಿತು. ಕೆ.ಆರ್.ಪೇಟೆ ಬಸ್ ನಿಲ್ದಾಣ ಮಾತ್ರ ಕೆಲವು ಗಂಟೆಗಳ ಕಾಲ ಇದು ಬಸ್ ನಿಲ್ದಾಣವೋ ಅಥವಾ ಕೆರೆಯೋ ಎಂಬಂತಾಗಿತ್ತು.
ಈ ಸಮಸ್ಯೆ ಇದೇ ಮೊದಲಲ್ಲ ಎರಡು ವರ್ಷಗಳ ಹಿಂದೆ ಕೆ.ಸಿ.ನಾರಾಯಣಗೌಡ ಸಚಿವರಾಗಿದ್ದ ವೇಳೆ ಇದೇ ರೀತಿ ಮಳೆ ನೀರು ತುಂಬಿಕೊಂಡು ಅವಾಂತರವಾಗಿತ್ತು ಈ ವೇಳೆ ಜಿಲ್ಲಾಧಿಕಾರಿಗಳು ನಾರಾಯಣಗೌಡರೊಂದಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆ ನೀರಿಗೆ ಕೆರೆಯಂತಾಗುವ ಬಸ್ ನಿಲ್ದಾಣಕ್ಕೆ ಶಾಸಕ ಹೆಚ್.ಟಿ.ಮಂಜು ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದ್ದು ಸಮಸ್ಯೆ ಬಗೆಹರಿಯುವುದೆ ಎಂದು ಕಾದು ನೋಡಬೇಕಿದೆ.