ಸಾಧನೆಗೆ ತಂದೆತಾಯಿ ಕೃಪೆಯೂ ಬೇಕು: ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.11: ಸಾಧಿಸಬೇಕೆಂದರೆ ದೈವ ಕೃಪೆಯ ಜೊತೆಗೆ ನಮ್ಮ ತಂದೆ ತಾಯಂದಿರ ಕೃಪೆಯೂ ಬೇಕು ಆಗ ಮಾತ್ರ ನಾವು ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಜನಜಾಗೃತಿ ವೇದಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು
ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಆರೋಗ್ಯ ರಕ್ಷಾ ವಿಮೆ ಹಣ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಬೀವೃದ್ದಿ ಸೇವಾ ಯೋಜನೆಯ ಎಲ್ಲಾ ಯೋಜನೆಗಳು ಸಂಕಷ್ಠದಲ್ಲಿರುವವರ ಪಾಲಿಗೆ ಸಂಜೀವಿನಿಯಾಗಿದೆ. ವೈದ್ಯಕೀಯ,ಇಂಜಿನಿಯರಿಂಗ್ ಮುಂತಾದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಸುಜ್ಞಾನ ನಿಧಿ ಶಿಷ್ಯ ವೇತನ ಮಕ್ಕಳ ಕಲಿಕೆಗೆ ಸಹಾಯಕವಾಗಿದೆ. ವಿದ್ಯಾರ್ಥಿಗಳು ಶಿಷ್ಯ ವೇತನದ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಸಂಸ್ಕಾರಯುತ ಜೀವನಕ್ಕೂ ನೀಡಬೇಕು. ಕಲಿಕೆ ಮುಗಿದು ಸಮಾಜದ ಮುಖ್ಯವಾಹಿನಿಗೆ ಬಂದಾಗ ನಾವು ಸಮಾಜದಿಂದ ಪಡೆದುದನ್ನು ಮತ್ತೆ ಸಮಾಜಕ್ಕೆ ಹಿಂದಿರುಗಿಸಬೇಕೆಂದ ಮಲ್ಲಿಕಾರ್ಜುನ್ ನಿತ್ಯ ದೇವರಿಗೆ ನಮಿಸುವಂತೆ ನಮ್ಮ ತಂದೆ ತಾಯಿಗಳಿಗೂ ನಮಿಸುವ ಪರಿಪಾಠ ರೂಡಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕಾರಗಳ ಶಕ್ತಿ ನಮಗೆ ಅರ್ಥವಾಗಬೇಕಾದರೆ ನಾವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ ವೃತ್ತಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಮಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳ ನೆರವಿಗಾಗಿ ಸುಜ್ಞಾನ ನಿಧಿ ಶಿಷ್ಯ ವೇತನ ಯೋಜನೆಯ ಮೂಲಕ ತಾಲೂಕಿನ 209 ವಿದ್ಯಾರ್ಥಿಗಳಿಗೆ 52,28,000 ರೂ ಮಂಜೂರಾಗಿದ್ದು ಇಂದಿನ ಸಮಾರಂಭದಲ್ಲಿ ಮಂಜೂರಾತಿ ಪತ್ರ ವಿತರಿಸಲಾಗುತ್ತಿದೆ. ಆರೋಗ್ಯ ರಕ್ಷಾ ಯೋಜನೆಯಡಿ ತಾಲೂಕಿನ 174 ಜನರಿಗೆ ಆರೋಗ್ಯ ವಿಮೆ ಮಂಜೂರಾಗಿದ್ದು ಇಂದಿನ ಕಾರ್ಯಕ್ರಮದ ಮೂಲಕ 20,70,114 ರೂ ವಿಮೆ ಹಣದ ಚೆಕ್ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದರು.
ಹೋಟೆಲ್ ರಾಮದಾಸ್ ಮಾಲೀಕ ಅರವಿಂದ ಕಾರಂತ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಂಜುನಾಥ್, ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ತಿಲಕ್ ರಾಜ್ ಉಪಸ್ಥಿತರಿದ್ದು ಮಾತನಾಡಿದರು.