ಭಾರತೀಯ ನ್ಯಾಯ ಸಂಹಿತೆಯಿAದ ತ್ವರಿತ ನ್ಯಾಯದಾನಕ್ಕೆ ಆದ್ಯತೆ: ನೀಲಕಂಠ ವಾಲೀಕಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೧: ಇತ್ತೀಚಿನ ಭಾರತೀಯ ನ್ಯಾಯ ಸಂಹಿತೆಯ ಹೊಸ ಮಸೂದೆಯು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು ದೇಶವಿರೋಧಿ ಅಪರಾಧಗಳ ಕಾನೂನುಗಳಿಗೆ ಆದ್ಯತೆ ನೀಡುತ್ತದೆ ಎಂದು ಸಂಸ್ಕೃತ ಭಾರತೀಯ ಜಿಲ್ಲಾಧ್ಯಕ್ಷ ನೀಲಕಂಠ ವಾಲೀಕಾರ ಹೇಳಿದರು.
ನಗರದ ದರಬಾರ ಕಾಲೇಜಿನಲ್ಲಿ ಶನಿವಾರದಂದು ಭಾರತಿಯ ಶಿಕ್ಷಣ ಮಂಡಲ ಹಾಗೂ ದರಬಾರ ಪದವಿ ವಿದ್ಯಾಲಯದ ಸಹಯೋಗದಲ್ಲಿ ಭಾರತೀಯ ನ್ಯಾಯ ಸಂಹಿತೆ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಹಿತೆಯು ನ್ಯಾಯವನ್ನು ನೀಡುವ ಮತ್ತು ಸಂವಿಧಾನದ ಪ್ರಕಾರ ಭಾರತೀಯ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ವಸಾಹತು ಕಾಲದ ಹಳೆಯ ಅಪರಾಧ ಕಾನೂನುಗಳು ಗುಲಾಮಗಿರಿಯ ಸಂಕೇತವಾಗಿದ್ದವು. ಇವು ನ್ಯಾಯದಾನಕ್ಕಿಂತ ಶಿಕ್ಷೆಗೇ ಹೆಚ್ಚಿನ ಒತ್ತು ನೀಡಿದ್ದವು. ಅವು ಬ್ರಿಟಿಷ್ ಆಡಳಿತದ ರಕ್ಷಣೆ ಹಾಗೂ ಬಲವರ್ಧನೆಯತ್ತ ಗಮನಹರಿಸಿದ್ದವು. ಅವುಗಳ ಬದಲಾಗಿ ಹೊಸ ಕಾನೂನು ವ್ಯವಸ್ಥೆ ಜಾರಿ ನಿಜಕ್ಕೂ ಫಲಪ್ರದವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ರಾಜೇಶ ದರಬಾರ ಮಾತನಾಡಿ, ಈ ಮೂರು ಅಪರಾಧ ಕಾನೂನುಗಳ ಬದಲಾಗಿ ತ್ವರಿತ ನ್ಯಾಯದಾನ ಹಾಗೂ ಸಮಕಾಲೀನ ಆವಶ್ಯಕತೆಗಳು ಮತ್ತು ಜನರ ಆಕಾಂಕ್ಷೆಗಳಿಗೆ ತಕ್ಕುದಾದ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶದಿಂದ ಈ ಹೊಸ ಕಾನೂನುಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು, ಸ್ವಾಗತಾರ್ಹ ಎಂದು ಹೇಳಿದರು.
ಪ್ರಾಂತ ಸಹ ಕಾರ್ಯದರ್ಶಿ ಸಿದ್ದು ಮದರಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪುನರುತ್ಥಾನದ ಉದ್ದೇಶದಿಂದ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ದೇಶದ ಎಲ್ಲಾ ಭಾಗಗಳಲ್ಲಿ ಹಲವಾರು ಶೈಕ್ಷಣಿಕ, ಬೌದ್ಧಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯತ್ತ ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವ್ಹಿ ವ್ಹಿ ಸಂಘದ ಸಮನ್ವಯಾಧಿಕಾರಿ ವಿನಾಯಕ ಗ್ರಾಮಪುರೋಹಿತ, ಪ್ರಾಚಾರ್ಯ ಗಿರೀಶ ಮಣೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಎಸ್ ಬಾಪಗೊಂಡ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡ್ಡದ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕೌಲಗಿ, ಡಾ. ಸುಮಾ ಬೋಳರೆಡ್ಡಿ, ಮಲ್ಲಿಕಾರ್ಜುನ ಮಾಳಿ, ಉಪನ್ಯಾಸಕ ಮಲ್ಲಿಕಾರ್ಜುನ ಸೇರಿದಂತೆ ದರಬಾರ ಸಂಸ್ಥೆಯ ಎಲ್ಲ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು.