ಪ್ರಾಣಿ ಪಕ್ಷಿಗಳಿಗೆ ಲೇಸನ್ನೇ ಬಯಸಿದ ಶರಣಬಸವರು
ಕಲಬುರಗಿ:ಆ.10:ಮಹಾದಾಸೋಹಿ ಶರಣಬಸವರು ಸಕಲ ಪಶು ಪಕ್ಷಿ ಪ್ರಾಣಿಗಳಿಗೆ ಲೇಸನ್ನೇ ಬಯಸಿದ್ದರು ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಮತ್ತು ನಿವೃತ್ತ ಪ್ರಾಚಾರ್ಯೆ ಡಾ.ನೀಲಾಂಬಿಕಾ ಪೋಲಿಸ್ ಪಾಟೀಲ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ಶರಣಬಸವೇಶ್ವರ ಸಂಸ್ಥಾನ ಕಾಪಾಡಿದ ಪಶು ಪಕ್ಷಿ ಪ್ರಾಣಿ ಸಂಕುಲ ವಿಷಯ ಕುರಿತು ಮಾತನಾಡಿದರು.
ದಯೆವಿಲ್ಲದ ಧರ್ಮವಾವುದಯ್ಯ ದಯೆ ಬೇಕು ಸಕಲ ಪ್ರಾಣಿಗಳಲ್ಲಿ ಎನ್ನುವ ಬಸವಣ್ಣನವರ ಧರ್ಮ ವ್ಯಾಖ್ಯಾನದಂತೆ ಬಾಳಿದ ಸಂಸ್ಥಾನವಿದು. ಒಂದು ಕೈಯಲ್ಲಿ ಕಾಯಕ ಇನ್ನೂಂದು ಕೈಯಲ್ಲಿ ದಾಸೋಹ ಮಾಡಿದ ಸಂಸ್ಥೆಯಿದು. ಇವೆರೆಡು ನಡೆದದು ಮಾನವ ಲೋಕಕೆ ಮಾತ್ರವಲ್ಲ ಮೂಕ ಲೋಕಕ್ಕೂ ಸಲ್ಲಿತು ಎಂದರು. ಶರಣರು ಬೇಲಿ ಹಚ್ಚಲಿಲ್ಲ, ದನ ಕರುಗಳನ್ನು ಹೊಡೆಯಲಿಲ್ಲ, ಬದಲಿಗೆ ಹಚ್ಚಿದ ಬೇಲಿ ಕಿತ್ತೊಗೆದು ಹೊಲದ ಬೇಲಿಯನ್ನು ಮೂಕ ಲೋಕಕ್ಕೆ ಮೀಸಲಾಗಿಟ್ಟರು. ರಂಜಣಗಿಗಳನ್ನು ಇಟ್ಟು ನೀರು ತುಂಬಿದರು.ಅಲ್ಲಿ ಮೇಯ್ದ ದನ ಕರುಗಳು ನೀರು ಕುಡಿದು ಸಂತೋಷದಿಂದ ಹೀಗೆ ಹಾಡುತ್ತಿದ್ದವಂತೆ. ” ಹಕ್ಕಿ ಬಂದಾವ ಹಾರಿ, ತೆನಿಯ ತಿಂದಾವ ಹಾರಿ, ಗಿಡದ ನೆರಳಿಗೆ ಕುಂತಾವ ಮಾತಾಡುತ್ತಾವ ಶಿವ ಹಾರ ಏನು ಶರಣಪ್ಪ, ದಾಸೋಹ ಇಟ್ಟಾರ ಶರಣಪ್ಪ ” ಎಂತಹ ಪ್ರೇಮವಿದು. ಶರಣರು ” ಮಂಚವು ಹಾಕಿಲ್ಲ ಹಕ್ಕಿಯ ಹೊಡದಿಲ್ಲ ಚುಂಚ ಹಾಕಿ ತೆನಿಯ ತಿಂದಾವ ” ಎನ್ನುತ್ತಾರೆ ಗರತಿಯರು.
ಶರಣಬಸವರು ದಾಸೋಹ ಕಾಯಕ ಬರೀ ಮನುಜರಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಇತರ ಪ್ರಾಣಿ ಹಾಗೂ ಹಕ್ಕಿಗಳಿಗೂ ನಡೆಯುತ್ತಿತ್ತು. ಅವರು ಕೃಷಿಯನ್ನು ತಮ್ಮ ಕಾಯಕವನ್ನಾಗಿಸಿ ಕೊಂಡಿದ್ದರು. ಹೊಲದಲ್ಲಿ ಹಕ್ಕಿಗಳ ಕಾಟದಿಂದ ಎಲ್ಲರೂ ಹಕ್ಕಿಗಳನ್ನು ಓಡಿಸುತ್ತಿದ್ದರು. ಹಕ್ಕಿಗಳು ಬೆಳೆಗಳಿಗೆ ಅಂಟಿಕೊಂಡಿರುವ ಹುಳುಗಳನ್ನು ತಿನ್ನುವುದರಿಂದ ಬೆಳೆಗಳು ಹಾಳಾಗುವುದು ಕಡಿಮೆಯಾಗುತ್ತದೆ ಎಂದರಿತ ಇವರು, ಹಕ್ಕಿಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಹೊಲಕ್ಕೆ ಬರುವ ಹಕ್ಕಿಗಳಿಗೆ ಕುಡಿಯುವ ನೀರಿನ ವ್ಯವಸ್ತೆಯನ್ನು ಮಾಡಿದರು. ಶರಣಬಸವರ ನಂತರ ಬಂದ ಎಲ್ಲ ಪೀಠಾಧಿಪತಿಗಳು ಸಹ ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು. ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರು ಅರ್ಧ ಹೋಲವನ್ನು ಪ್ರಾಣಿಗಳ ಆಹಾರಕ್ಕಾಗಿ ಬೆಳೆಯುತ್ತಿದ್ದರು. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಸಹ ಪ್ರಾಣಿ, ಪಕ್ಷಿಗಳಿಗೆ ಮತ್ತು ದನ ಕರುಗಳಿಗೆ ಪ್ರೀತಿ ತೋರಿಸುತ್ತಾರೆ. ಪೂಜ್ಯ ಡಾ.ದಾಕ್ಷಾಯಣಿ ಅವ್ವ ಅವರು ಸಹ ಪಶು ಪಕ್ಷಿಗಳಿಗೆ ಆಹಾರ ವ್ಯವಸ್ಥೆ ಮಾಡುತ್ತಾರೆ ಮತ್ತು ದನ ಕರುಗಳಿಗೆ ಗೋಶಾಲೆ ತೆರೆದು ಅವುಗಳ ಸಾಕುವ ದೊಡ್ಡ ಕಾಯಕದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.