ಸಚಿವರೇ, ಕ್ಷೇತ್ರದ ಕಾನೂನು ವ್ಯವಸ್ಥೆ ಸುಧಾರಿಸಿ : ತೇಲ್ಕೂರ
ಕಲಬುರಗಿ:ಆ.10:ಸೇಡಂ ಪಟ್ಟಣದಲ್ಲಿ ಹಾಡ ಹಗಲಲ್ಲೇ ಯುವಕರನ್ನು ಪುಂಡರ ಗುಂಪೊಂದು ಮನಸೋ ಇಚ್ಛೆ ಥಳಿಸಿರುವ ಘಟನೆಯನ್ನು ಗಮನಿಸಿದರೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಂತೆ ಕಾಣುತ್ತಿದೆ. ಸಚಿವ ಡಾ|ಶರಣಪ್ರಕಾಶ ಪಾಟೀಲ್ ಎಲ್ಲಿದ್ದಾರೆ. ತಾಲೂಕಿನಲ್ಲಿ ಏನು ನಡಿಯುತ್ತಿದೆ ಎನ್ನುವುದನ್ನು ಅವರು ಗಮನಿಸಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದು ಭಾರತ ದೇಶದ ಕರ್ನಾಟಕ, ಅದರಲ್ಲೂ ರಾಷ್ಟ್ರಕೂಟರ ನಾಡು ಇದು ತಾಲಿಬಾನ್ ಅಲ್ಲ. ಕೆಲವು ಪುಂಡರು ಕ್ಷೇತ್ರದಲ್ಲಿ ತಾಲಿಬಾನ್ ಸಂಸ್ಕøತಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಪೊಲೀಸರು ಈ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು. ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗದಿದ್ದಾಗ ಈ ರೀತಿಯ ಘಟನೆಗಳು ನಡೆಯುತ್ತವೆ. ಶುಕ್ರವಾರ ಪಟ್ಟಣದಲ್ಲಿ ಯುವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಮುಂದೆ ಯಾವುದೇ ಕಾರಣಕ್ಕೆ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗದ ರೀತಿಯಲ್ಲಿ ಪಾಠ ಕಲಿಸಬೇಕು. ಈ ರೀತಿಯ ಘಟನೆಗಳು ಮುಂದೆ ಮರುಕಳಿಸಿದರೆ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಚಿವರಿಗೆ ಕಾನೂನು ಸುವ್ಯವಸ್ಥೆ ಸುಧಾರಣೆ ಮಾಡೋದಕ್ಕೆ ಆಗದಿದ್ದರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಹೇಸರಿನಲ್ಲಿಯೇ ವಂಚನೆ;
ಸೇಡಂನಲ್ಲಿ ನಾವು ಪೊಲೀಸರು ಎಂದು ಹೇಳಿಕೊಂಡು ಕೆಲವರು ಜನರ ಬಳಿ, ವ್ಯಾಪಾರಿಗಳ ಬಳಿಯಿದ್ದ ಚಿನ್ನ, ಹಣ ದೋಚಿ ವಂಚನೆ ಮಾಡಿದ್ದಾರೆ. ಅವರನ್ನು ಬಂಧಿಸುವ ಕೆಲಸವಾಗಿಲ್ಲ. ತಾಲೂಕಿನ ಹಲವೆಡೆ ಮಳಿಗೆ, ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ ಅವರನ್ನು ಪತ್ತೆಹಚ್ಚುವ ಕೆಲಸವಾಗಿಲ್ಲ. ಕೂಡಲೇ ಕಳ್ಳರನ್ನು ಬಂಧಿಸಿ ಅವರಿಂದ ದೋಚಿದ್ದ ವಸ್ತು, ಹಣವನ್ನು ವಾಪಾಸ್ ಪಡೆದು ವಾರಸುದಾರರಿಗೆ ನ್ಯಾಯ ಕಲ್ಪಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.