ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: ಭಾರತ ಸರ್ಕಾರದ ಮಧ್ಯಸ್ಥಿಕೆಗೆ ಬಜರಂಗದಳ ಆಗ್ರಹ
ಕಲಬುರಗಿ:ಆ.10: ಬಾಂಗ್ಲಾದೇಶದಲ್ಲಿನ ಹಿಂದೂಗಳ ಹಾಗೂ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯಲು ಭಾರತ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು ಎಂದು ರಾಷ್ಟ್ರೀಯ ಬಜರಂಗದಳದ ಜಿಲ್ಲಾ ಪ್ರಮುಖ ಮಲ್ಲಿಕಾರ್ಜುನ್ ಆದ್ವಾನಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಕಗ್ಗೊಲೆ, ಮಹಿಳೆಯರ ಮೇಲಿನ ಅತ್ಯಾಚಾರ, ದೇವಸ್ಥಾನಗಳ ಧ್ವಂಸ ಮುಂತಾದ ಅಹಿತಕರ ಘಟನೆಗಳು ಖಂಡನಾರ್ಹ ಎಂದು ಆಕ್ಷೇಪಿಸಿದರು.
ನನ್ನ ಚಿನ್ನದ ಬಾಂಗ್ಲಾ ನಾನು ನಿನ್ನನ್ನು ಪ್ರೀತಿಸುತ್ತೇನೆ. ಎಂದೆಂದಿಗೂ ನಿನ್ನ ಆಕಾಶ, ಗಾಳಿಯ ಮಧುರ ಧ್ವನಿ ನನ್ನ ಆತ್ಮದಲ್ಲಿ ನುಡಿಯುತ್ತಿದೆ. ಓ ತಾಯಿ ಎಂದು 1950ರಲ್ಲಿ ಕವಿ ರವೀಂದ್ರನಾಥ್ ಠ್ಯಾಕೂರ್ ಅವರು ಬರೆದ ಬಾಂಗ್ಲಾ ದೇಶದ ರಾಷ್ಟ್ರೀಯ ಗೀತೆ ಅಮರ್ ಸೋನಾರ್ ಅವರು 1971ರಲ್ಲಿ ರಾಷ್ಟ್ರಗೀತೆಯನ್ನಾಗಿ ಆ ರಾಷ್ಟ್ರ ಬಳಸಿತ್ತು. ಬಾಂಗ್ಲಾದೇಶವು ಭಾರತದ ಸ್ವಾತಂತ್ರ್ಯದ ಭಿಕ್ಷೆಯಾಗಿದೆ ಎಂದು ಅವರು ಹೇಳಿದರು.
ಅದೇ ಚಿನ್ನದ ಬಾಂಗ್ಲಾ ಈಗ ಅರಾಜಕತೆಯಲ್ಲಿದೆ. ವಿದ್ಯಾರ್ಥಿಗಳ ಆಕ್ರೋಶದ ಹಿಂದೆ ಜಮಾತೆ ಏ ಇಸ್ಲಾಂ ಇಸ್ಲಾಮಿಕ್ ಜಿಹಾದಿ ಮೂಲಭೂತವಾದಿಗಳ ಮತ್ತು ಪಾಕಿಸ್ತಾನದ ಐಎಸ್‍ಐ ಮೂಲಭೂತವಾದಿಗಳು ಬಾಂಗ್ಲಾ ದೇಶದ ಹಿಂದೂಗಳ ಮಾರಣ ಹೋಮ, ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮುಂತಾದವು ಇಡೀ ವಿಶ್ವದಲ್ಲಿಯೇ ಮಾನವ ಕುಲಕ್ಕೆ ಹೇಯ ಕೃತ್ಯವಾಗಿದೆ. ಬಾಂಗ್ಲಾ ದೇಶದಲ್ಲಿ ಮೀಸಲಾತಿಯ ಹೆಸರಿನಲ್ಲಿ ಅಲ್ಪಸಂಖ್ಯಾತರಾದ ಹಿಂದೂ, ಬೌದ್ಧ, ಸಿಖ್ಖರ ಮೇಲೆ ನೇರವಾಗಿ ಅತ್ಯಾಚಾರ, ಆಸ್ತಿ, ಪಾಸ್ತಿ ನಾಶ ಮಾಡುತ್ತಿರುವುದು ಖೇದಕರ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತ ಸರ್ಕಾರ ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ, ಪುರಾತನ ಹಿಂದೂ ದೇವಸ್ಥಾನ, ಬೌದ್ಧ ಮಂದಿರ, ಶಿಖ್ ಗುರುದ್ವಾರ ರಕ್ಷಣೆಗಾಗಿ ವಿದೇಶಿ ನೀತಿಯನ್ನು ಅನುಸರಿಸಿ ರಕ್ಷಿಸಬೇಕು ಎಂದು ಒತ್ತಾಯಿಸಿದ ಅವರು, ಎಲ್ಲ ಸಾಧು, ಸಂತ, ಮಹಾಂತರು, ಮಠಾಧೀಶರು, ಪೀಠಾಧೀಶರು, ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಹಿಂಸಾಚಾರ ನೆಪದಲ್ಲಿ ಬಾಂಗ್ಲಾದೇಶದ ಮತ್ತು ಪಾಕಿಸ್ತಾನ್ ಇಸ್ಲಾಮಿಕ್ ಜೆಹಾದಿ ಭಯೋತ್ಪಾದಕರು ಭಾರತದ ಗಡಿಭಾಗದಲ್ಲಿ ನುಸುಳದಂತೆ ಭಾರತ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಈಗಾಗಲೇ ಆ ದೇಶದಲ್ಲಿ ಮೂರು ಕೋಟಿ ಅಕ್ರಮ ಮುಸ್ಲಿಂ ವಲಸಿಗರು ಅಕ್ರಮ ಚಟುವಟಿಕೆ, ಡ್ರಗ್ಸ್ ದಂಧೆ, ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜು, ಖೋಟಾನೋಟು ದಂಧೆ ರಾಜಾರೋಷವಾಗಿ ನಡೆಸುತ್ತಿದ್ದಾರೆ. ಆದಾಗ್ಯೂ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರವು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದೆ. ಇದು ದೇಶಕ್ಕೆ ಅಪಾಯಕಾರಿ. ಇದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲ ನಗರ ಘಟಕದ ಅಧ್ಯಕ್ಷ ವಿಜಯಕುಮಾರ್ ಎಂ. ಕದ್ದರ್ಗಿ, ಕಿಶನರಾವ್ ಕುಲಕರ್ಣಿ, ವೀರೇಶ್ ಬಸ್ತೆ, ಶಿವಕುಮಾರ್ ಎಂ. ಪುರೆ, ಜಯರಾಜ್ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು.