ಪಾರಂಪರಿಕ ಪುತ್ತೂರು ನಾಡಹಬ್ಬಕ್ಕೆ ‘ಕಪ್ಪುಚುಕ್ಕಿ’; ೨ನೇ ಬಾರಿಗೆ ಪುತ್ತೂರ ಹಬ್ಬ ಸ್ಥಗಿತ ಸಾಧ್ಯತೆ..!
ಪುತ್ತೂರು: ಪುತ್ತೂರಲ್ಲಿ ನಾಡಹಬ್ಬದ ವೈಭವ ಸಾಂಸ್ಕೃತಿಕ ಪರಂಪರೆಯ ವೈಭವೀಕರಣದ ಹಿನ್ನಲೆಯಲ್ಲಿ ಸಾಹಿತಿ ಡಾ.ಶಿವರಾಮ ಕಾರಂತರು ೧೯೩೧ರಲ್ಲಿ ಪ್ರಾರಂಭಿಸಿದ ಪುತ್ತೂರು ದಸರಾ ನಾಡಹಬ್ಬ ಎರಡನೇ ಬಾರಿಗೆ ಸ್ಥಗಿತಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ವೈಭವದ ಪಾರಂಪರಿಕ ವ್ಯವಸ್ಥೆಗೆ ಈ ಬಾರಿ ‘ಕಪ್ಪುಚುಕ್ಕಿ’ ಇಡುವುದು ಬಹುತೇಕ ಖಚಿತವಾಗಿದೆ.
ನೆಲ್ಲಿಕಟ್ಟೆಯ ಶಾಲೆಯಲ್ಲಿ ಆರಂಭಗೊಂಡ ಈ ‘ಪುತ್ತೂರಿನ ಪರ್ಬದಲ್ಲಿ ಸಾಹಿತ್ಯ ಚಿಂತನೆಯನ್ನು ಹಂಚುವ ನಿಟ್ಟಿನಲ್ಲಿ ಮೇಧಾವಿ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ ಕೊಡಿಸುವ ಪರಿಪಾಠವನ್ನು ಕಾರಂತರು ಹಳೆಯ ಕಾಲದಲ್ಲಿಯೇ ಆರಂಭ ಮಾಡಿದ್ದರು. ಕೆಲ ವರ್ಷಗಳ ಕಾಲ ಸಂಭ್ರಮದಿಂದ ನಡೆದ ಈ ನಾಡಹಬ್ಬ ಸ್ಥಗಿತಗೊಂಡಿತ್ತು. ಮತ್ತೆ ಇದನ್ನು ಪುನರಾರಂಭಿಸಿದ ಕೀರ್ತಿ ಕಾರಂತರ ಬಾವ ಸದಾಶಿವ ರಾಯರಿಗೆ ಸಲ್ಲುತ್ತದೆ. ಆದರೆ ನೆಲ್ಲಿಕಟ್ಟೆಯಿಂದ ಈ ನಾಡಹಬ್ಬ ಪುತ್ತೂರಿನ ದೇವಳಕ್ಕೆ ಸ್ಥಳಾಂತರಗೊಂಡಿತು. ಬಳಿಕ ಒಂದೆರಡು ವರ್ಷ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದ ಚೌಕಟ್ಟಿಗೆ ಸೀಮಿತಗೊಂಡು ನಡೆಯಿತಾದರೂ ಆಮೇಲೆ ಮತ್ತೆ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಿರಂತರವಾಗಿ ನಡೆದುಕೊಂಡು ಬರಲಾರಂಭಿಸಿದೆ.
ಆದರೆ ಈ ಬಾರಿ ಈ ನಾಡಹಬ್ಬವನ್ನು ನಡೆಸುವ ಮಂದಿಗಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಾರ್ಯಕ್ರಮ ಆಯೋಜನೆ ಮಾಡುವುದು ಅಸಾಧ್ಯ ಎಂಬ ವಿಚಾರಗಳು ವ್ಯಕ್ತವಾಗುತ್ತಿವೆ. ಸುಮಾರು ೭ ದಿನಗಳ ವಿಶೇಷ ಕಾರ್ಯಕ್ರಮಗಳು, ಸಾಂಸ್ಕೃತಿಕ ಮನೋರಂಜನೆ, ಉಪನ್ಯಾಸ ಹೀಗೆ ಕಾರ್ಯಕ್ರಮ ಆಯೋಜನೆಯೂ ಸುಲಭಸಾಧುವಲ್ಲ. ಆದರೆ ಐತಿಹಾಸಿಕ ಪರಂಪರೆಯೊಂದನ್ನು ಹುಟ್ಟು ಹಾಕಿದ ಡಾ.ಕಾರಂತರ ಆಶಯಕ್ಕೆ ಈ ಕಾರ್ಯಕ್ರಮ ಸ್ಥಗಿತ ವಾಗುವ ಮೂಲಕ ನಾಡಹಬ್ಬದ ಮೆರುಗಿಗೆ ಅಪಮಾನವಾಗುವ ಸಾಧ್ಯತೆಯಾಗಿದೆ. ಹಾಗಾಗಿ ನಾಡಹಬ್ಬ ನಿಲ್ಲಿಸುವ ಪ್ರಶ್ನೆ ಇಲ್ಲವೇ ಇಲ್ಲ ಎಂಬ ಧ್ವನಿಯೂ ಹಿರಿಯ ಸಾಹಿತಿಗಳಿಂದ ವ್ಯಕ್ತವಾಗಿದೆ.
ಮುಂದೂಡಲಾಗಿದೆಯಾ..!
ದಸರಾ ನಾಡಹಬ್ಬ ಆಚರಣೆ ದಸರಾ ಸಂದರ್ಭವೇ ಆಗಬೇಕು. ಆದರೆ ಇದನ್ನು ಮುಂದೂಡಲಾಗುತ್ತದೆ ಎಂಬ ಅಭಿಪ್ರಾಯಗಳೂ ಕೆಲವರಿಂದ ವ್ಯಕ್ತವಾಗುತ್ತಿದೆ. ಕಾರಂತರ ಇಚ್ಛೆಯ ಈ ನಾಡಹಬ್ಬವನ್ನು ನಡೆಸುವಲ್ಲಿ ಹಿರಿಯರಾದ ಬೋಳಂತಕೋಡಿ, ಮೊಳೆಯಾರ್, ಎನ್. ಸುಬ್ರಹ್ಮಣ್ಯ ಕೊಳತ್ತಾಯ, ಬಿ.ಐತ್ತಪ್ಪ ನಾಯ್ಕ್, ಬಿ.ಪುರಂದರ ಭಟ್, ಪ್ರೊ. ವಿ.ಬಿ ಅರ್ತಿಕಜೆ, ರಮೇಶ್ ಬಾಬು, ವತ್ಸಲ ರಾಜ್ಞಿ, ಎ.ವಿ.ನಾರಾಯಣ, ಹರಿಣಾನಾಯಣ ಮಾಡಾವು, ಶ್ರೀಗಿರೀಶ್ ಮಳಿ, ಸೀತಾರಾಮ ಶಾಸ್ತ್ರೀ, ಎಂ.ಟಿ.ಜಯರಾಮ್ ಭಟ್, ವಾಟೆಡ್ಕ ಕೃಷ್ಣ ಭಟ್, ಎನ್.ಕೆ.ಜಗನ್ನಿವಾಸ ರಾವ್, ನಟ್ಟೋಜ ಸುಬ್ರಹ್ಮಣ್ಯ ರಾವ್ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾಡಹಬ್ಬ ಸಮಿತಿ ಅಧ್ಯಕ್ಷರು ಅನಾರೋಗ್ಯದಲ್ಲಿದ್ದ ಕಾರಣ ತಾತ್ಕಾಲಿಕವಾಗಿ ನಾಡಹಬ್ಬ ಮುಂದೂಡಲಾಗುತ್ತಿದೆ ಎಂಬ ಮಾಹಿತಿಯನ್ನು ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ನೀಡಿದ್ದಾರೆ.
ಡಿಸೆಂಬರ್ ನಲ್ಲಿ ನಾಡಹಬ್ಬ…!
ಈ ಬಾರಿ ಮಳೆಯ ಅಬ್ಬರ ಜೋರಾಗಿದೆ. ಶ್ರೇಷ್ಟಮಟ್ಟದ ಉಪನ್ಯಾಸ, ಕಲಾವಿದರು ಬಂದಾಗ ಇಲ್ಲಿ ಪ್ರೇಕ್ಷಕವರ್ಗ ಇಲ್ಲವಾದರೆ ಎಲ್ಲರ ಶ್ರಮವೂ ವ್ಯರ್ಥವಾಗುತ್ತದೆ. ಕಾರಂತರ ಆಶಯದ ಈ ಕಾರ್ಯಕ್ರಮವನ್ನು ಮುಂದಿನ ಡಿಸೆಂಬರ್ ನಲ್ಲಿ ನಡೆಸಲಾಗುವುದು ಎಂಬ ಅಭಿಪ್ರಾಯವನ್ನು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್ ಅವರು ತಿಳಿಸಿದ್ದಾರೆ.
–ಕೋಟ್–
ಯಾರಾದರೂ ಮುಂದೆ ಬನ್ನಿ..
ಪುತ್ತೂರು ಅನುರಾಗ ವಠಾರದಲ್ಲಿಯ ಕಾರ್ಯಕ್ರಮವೊಂದರಲ್ಲಿ ಪ್ರೊ. ವಿ,ಬಿ.ಅರ್ತಿಕಜೆ ಅವರು ನಾಡಹಬ್ಬ ಇನ್ನಿಲ್ಲ ಎಂಬ ಮಾಹಿತಿಯನ್ನು ಹೊರಗೆಡವಿದ್ದರು.
ಪುತ್ತೂರು ದೇವಳದ ನಟರಾಜ ವೇದಿಕೆಯಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದ ನಾಡಹಬ್ಬ ಇಲ್ಲ ಎಂಬ ವಾರ್ತೆ ನನಗೆ ನೋವು ತಂದಿದೆ. ಕೇವಲ ಒಬ್ಬರನ್ನು ನಂಬಿಕೊಂಡು ಆಚರಣೆ ಮಾಡುವ ಕಾರ್ಯಕ್ರಮ ಇದಲ್ಲ. ಸಮಿತಿಯಲ್ಲಿ ಇರುವವರು ಮುಂದೆ ನಿಂತು ಮಾಡಬೇಕಾಗಿತ್ತು. ಆದರೆ ಯಾರೂ ಮುಂದೆ ಬರದೇ ಇರುವುದೇ ದೊಡ್ಡ ದುರಂತ. ಯಾರಾದರೂ ಮುಂದೆ ಬಂದು ಈ ಕಾರ್ಯಕ್ರಮ ಸ್ಥಗಿತವಾಗದ ಹಾಗೇ ಮಾಡಿದರೆ ತುಂಬಾ ಸಂತೋಷ- ಸಾಹಿತಿ ವಿ.ಬಿ.ಅರ್ತಿಕಜೆ