ಅಕ್ಟೋಬರ್ 2ರಂದು 111 ಶಿಕ್ಷಕರಿಗೆ ಕಲಿಕಾ ಸ್ನೇಹಿ ಶಿಕ್ಷಕ ಪುರಸ್ಕಾರ
ಕಲಬುರಗಿ:ಸೆ.30: ಶಿಕ್ಷಕರ ದಿನಾಚರಣೆ ನಿಮಿತ್ಯ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಅಕ್ಟೋಬರ್ 2ರಂದು ಸಂಜೆ 3-15 ಗಂಟೆಗೆ ಸುಮಾರು 111 ಶಿಕ್ಷಕರಿಗೆ ಕಲಿಕಾ ಸ್ನೇಹಿ ಶಿಕ್ಷಕ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಜಯ್ ಎಜುಕೇಶನಲ್ ಅಂಡ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಡಾ. ಸುನೀಲಕುಮಾರ್ ಎಚ್. ವಂಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯ ಕಾಂಡಾ ಎಜುಕೇಶನಲ್ ಟ್ರಸ್ಟ್ ಸಹಯೋಗದಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡೂ ಸಂಸ್ಥೆಗಳು ಸುಮಾರು ವರ್ಷಗಳಿಂದ ಶಿಕ್ಷಣದ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿವೆ ಎಂದರು.
ಉಭಯ ಸಂಸ್ಥೆಗಳ ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಕಳೆದ ವರ್ಷದಿಂದ ವಿಜೃಂಭಣೆಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ, ಶಿಕ್ಷಕಿಯರಿಗೆ ಕಲಿಕಾ ಸ್ನೇಹಿ ಶಿಕ್ಷಕ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತೀಯ ಶಿಕ್ಷಣ ಪರಂಪರೆಯಲ್ಲಿ ಶಿಕ್ಷಕರಿಗೆ ತನ್ನದೇ ಆದ ಮಹತ್ವವಿದೆ. ಗುರುಕುಲ ಪದ್ದತಿಯಿಂದ ಹಿಡಿದು ಇಂದಿನ ಆಧುನಿಕ ಶಿಕ್ಷಣದವರೆಗೆ ಶಿಕ್ಷಣ ವಿಶೇಷ ರೂಪ ಪಡೆಯುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದಾಗಿದೆ. ಭಾರತ ದೇಶದಲ್ಲಿ ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಮಹಾಪುರುಷ ಜ್ಯೋತಿಭಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಮತ್ತು ಶೇಖ್ ಫಾತಿಮಾ ಅವರು ಭಾರತದ ಮೊದಲ ಮಹಿಳಾ ಶಿಕ್ಷಕರಾಗಿ ಮಾದರಿಯಾಗಿದ್ದಾರೆ ಎಂದು ಅವರು ಬಣ್ಣಿಸಿದರು.
ಇಂತಹ ಅನೇಕ ಮಹಾನುಭಾವರ ಸ್ಮರಣೆಯನ್ನು ಮಾಡಲು ಪ್ರೇರಣೆ ಎಂಬಂತೆ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಆದರ್ಶಪ್ರಾಯ ನಡುವಳಿಕೆ ಶಿಕ್ಷಕರ ದಿನಾಚರಣೆಗೆ ನಾಂದಿಯಾಯಿತು. ಶಿಕ್ಷಕ ಸಮಾಜವನ್ನು ರೂಪಿಸುವ ಇಂತಹ ಜವಾಬ್ದಾರಿಯುತ ಹೊಣೆ ಹೊತ್ತು ಮಗುವಿನ ಉತ್ತಮ ಸಾಮಾಜೀಕರಣ ಮಾಡುವಲ್ಲಿ ಗುರುತರ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿರುವ ಅಂತಹ ಉತ್ತಮ ಬೋಧನೆಯೊಂದಿಗೆ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದ ಶಿಕ್ಷಕರನ್ನು ಗುರುತಿಸಿ ಸುಮಾರು 111 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಳ್ಳಾರಿಯ ಕಾಂಡ್ರಾ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷ ಕಾಂಡ್ರಾ ಸತೀಶಕುಮಾರ್, ಆದರ್ಶ ಸೇವಾ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀಕಾಂತ್ ಪಾಟೀಲ್, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಂ.ಬಿ. ನಿಂಗಪ್ಪ, ವಿಶ್ವರಂಗ ಕಲಾ ತಂಡದ ಅಧ್ಯಕ್ಷ ವಿಶ್ವರಾಜ್ ಪಾಟೀಲ್, ಹೈದ್ರಾಬಾದ್ ಕರ್ನಾಟಕ ಸಿದ್ದಾರ್ಥ ಸೇವಾ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ತೆಳಕೇರಿ, ಸಂಜಯ್ ಎಜುಕೇಶನಲ್ ಮತ್ತು ವೆಲ್‍ಫೇರ್ ಸೊಸೈಟಿ ಕಾರ್ಯದರ್ಶಿ ಸಂಜಯ್ ವಂಟಿ ಮುಂತಾದವರು ಉಪಸ್ಥಿತರಿದ್ದರು.