ಮುಡಾ ಹಗರಣದಲ್ಲಿ ಸಿಎಂ ಹೆಸರಿಗೆ ಮಸಿ ಬಳಿಯುವ ಯತ್ನ : ಡಿಎಸ್‍ಸ್ ಅಣ್ಣಯ್ಯ ಬಣ ಖಂಡನೆ
ವಿಜಯಪುರ,ಆ.10 :ಮುಡಾ ನಿವೇಶನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಎಳಷ್ಟು ಇಲ್ಲ. ವಿನಾಕಾರಣ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ (ಅಣ್ಣಯ್ಯ ಬಣ)ದ ರಾಜ್ಯ ಸಂಘಟನಾ ಸಂಚಾಲಕ ಬಾಳೇಶ ಬನಹಟ್ಟಿ ತೀವ್ರವಾಗಿ ಖಂಡಿಸಿದ್ದಲ್ಲದೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.
ಕಳಂಕರಹಿತ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಸಹಿಸದ ವಿಪಕ್ಷಗಳು ಅವರ ಹೆಸರನ್ನು ಹಾಳುಗೆಡವಲು ಅವರಿಗೆ ಸಂಬಂಧವೇ ಇಲ್ಲದ ವಿಷಯವಾಗಿರುವ ಹಾಗೂ ಅವರ ಪತ್ನಿಗೆ ತವರು ಮನೆಯಿಂದ ಬಂದಿರುವ ನಿವೇಶನದ ಬಗ್ಗೆ ಪ್ರಮುಖವಾಗಿ ಪಿಟಿಸಿಎಲ್ ಕಾಯ್ದೆಗೆ ಅನ್ವಯಿಸದೆ ಇರುವ ವಿಚಾರವನ್ನು ಮುಂದಿಟ್ಟುಕೊಂಡು ಕುತಂತ್ರ ಮಾಡುತ್ತಿದ್ದಾರೆ. ಈ ಹಿಂದೆ ಯಾರೂ ಕೂಡಾ ಈ ರೀತಿ ನಿವೇಶನ ಪಡೆದಿಲ್ಲವೇ? ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಮತ್ತು 14 ಸಲ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಪಾರದರ್ಶಕ ಆಡಳಿತ ನೀಡಿದ್ದು, ದಲಿತ ಸಂಘರ್ಷ ಸಮಿತಿ ಅಣ್ಣಯ್ಯ ಬಣ ಅವರ ಬೆನ್ನಿಗೆ ಸದಾ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಬಗ್ಗೆ ಈಗಾಗಲೇ ಆ ಇಲಾಖೆಯ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದು, ಅವರನ್ನೂ ಸೇರಿ ಇನ್ನಿಬ್ಬರ ಅಧಿಕಾರಿಗಳನ್ನು ಬಂಧಿಸಿದ್ದು ಪ್ರಕರಣದ ವಿಚಾರಣೆ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ವಿನಾಕಾರಣ ವಾಲ್ಮೀಕಿ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಮುಂದಕ್ಕೆ ತಂದು ಅವರನ್ನು ಸಿಲುಕಿಸುವ ಸಂಚು ಮಾಡಿ, ವಿಪಕ್ಷಗಳು ವ್ಯವಸ್ಥಿತವಾಗಿ ಕುತಂತ್ರ ಮಾಡುತ್ತಿವೆ. ನಿಗಮದ ಹಗರಣದಲ್ಲಿ ಯುನಿಯನ್ ಬ್ಯಾಂಕ್‍ನಲ್ಲಿ 89 ಕೋಟಿ ವಹಿವಾಟು ಆಗಿದ್ದರೆ, ವ್ಯವಸ್ಥಾಪಕರನ್ನೇಕೆ ಇನ್ನೂವರೆಗೆ ಬಂಧಿಸಿರುವುದಿಲ್ಲ ಎನ್ನುವುದನ್ನು ಚರ್ಚೆ ಮಾಡಲಿ. ಅವರ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಲಕ್ಕಪ್ಪ ಕೆಳಕಡೆ, ಬೆಳಗಾವಿ ವಿಭಾಗೀಯ ಅಲ್ಪಸಂಖ್ಯಾತರ ಸಂಚಾಲಕ ಅಬ್ದುಲ್‍ಬಕ್ಷ ಮುಲ್ಲಾ, ಗೋಕಾಕ ತಾಲೂಕ ಅಲ್ಪಸಂಖ್ಯಾತರ ಸಂಚಾಲಕ ಅಬ್ದುಲರೌಫ ಖಾಜಿ ಮತ್ತಿತರರು ಉಪಸ್ಥಿತರಿದ್ದರು.