ಸಂತ ಶರಣರ ಜಯಂತಿಗಳನ್ನು ಅಚ್ಚುಕಟ್ಟಾಗಿಆಚರಿಸೋಣ:ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ
ಬೀದರ, ಆ.10: ಆಗಸ್ಟ್. 19 ರಂದು ನುಲಿಯ ಚಂದಯ್ಯ ಜಯಂತಿ, 20 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ 26 ರಂದು ಶ್ರೀ ಕೃಷ್ಣ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕು ಈ ಮೂರು ಜಯಂತಿಗಳು ಆಗಸ್ಟ್ ತಿಂಗಳಿನಲ್ಲಿ ಬಂದಿರುವುದರಿಂದ ಈ ಸಂತ ಶರಣರ ಜಯಂತಿ ಪೂರ್ವಭಾವಿ ಸಭೆಯನ್ನು ಒಟ್ಟಿಗೆ ಕರೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ನುಲಿಯ ಚಂದಯ್ಯ, ಬ್ರಹ್ಮ ಶ್ರೀ ನಾರಾಯಣ ಗುರು ಹಾಗೂ ಶ್ರೀ ಕೃಷ್ಣ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಲ್ಲಾ ಮಹನೀಯರ ಜಯಂತಿಗಳಂತೆ ಈ ಜಯಂತಿಗಳನ್ನು ಆಚರಿಸಲಾಗುತ್ತದೆ. ಸಮಾಜದ ಮುಖಂಡರು ಜಯಂತಿ ಆಚರಣೆ ಕುರಿತು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ. ನಗರಸಭೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಜಯಂತಿಗಳಲ್ಲಿ ತಮ್ಮ- ತಮ್ಮ ಇಲಾಖೆಯ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕೆಂದು ಹೇಳಿದರು.
ಆಯಾ ಜಯಂತಿ ದಿನಗಳಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಈ ಸಂತ ಶರಣರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರ ಬೀದರನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿವೆ. ಈ ಜಯಂತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಜಿಲ್ಲಾ ವಾರ್ತಾಧಿಕಾರಿ ಡಾ.ಸುರೇಶ ಜಿ., ಸಮಾಜದ ಮುಖಂಡರಾದ ರಾಜಕುಮಾರ ಅಳ್ಳೆ, ರಾಮಕೃಷ್ಣ ಸಾಳೆ, ಜಗನ್ನಾಥರೆಡ್ಡಿ, ವೈ ಮಾಣಿಕರಾವ್, ಶಾಂತಕುಮಾರ ಯಾದವ್, ಕೆ. ಸಿದ್ರಾಮೇಶ್ವರ, ಸೂರ್ಯಕಾಂತ ಕಮಠಾಣ ಸೇರಿದಂತೆ ಇತರೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.