ಬಸವ ಪಂಚಮಿ ನಿಮಿತ್ಯ ಬುದ್ಧಿ ಮಾಂದ್ಯ ಮಕ್ಕಳಿಗೆ ಹಾಲು-ಹಣ್ಣು ವಿತರಣೆ
ಬೀದರ:ಆ.10: ನಗರದ ನವಜೀವನ ವಿಶೇಷ ಮಕ್ಕಳ ವಸತಿಯುತ ಶಾಲೆ ಮೈಲೂರ ರಸ್ತೆ ಬೀದರನಲ್ಲಿ ಡಾ. ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದ ವತಿಯಿಂದ ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿ ಹಬ್ಬವೆಂದು ಆಚರಿಸಲಾಯಿತು.
ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಆಚರಿಸಿ, ಮಕ್ಕಳಿಗೆ ಹಾಲು ಹಣ್ಣುಗಳನ್ನು ಕೊಡುವುದರಿಂದ ನಿಜವಾದ ಪಂಚಮಿ ಆಚರಣೆ ಮಾಡಿದ್ದು, ಸಾರ್ಥಕವಾಗುತ್ತದೆ. ಜಡವಸ್ತುವಿನ ಮೇಲೆ ಹಾಲು ಹಾಕಿದರೆ ಆ ವಸ್ತುವಿಗೆ ಚೈತನ್ಯ ಬರುವುದಿಲ್ಲ. ಹುತ್ತಿನ ಮೇಲೆ ಹಾಲು-ಅಳ್ಳು ಹಾಕಿ ಪೂಜೆ ಮಾಡಿದರೆ ದೇವರಿಗೆ ಅರ್ಪಿತವಾಗುವುದಿಲ್ಲ. ಅದರಿಂದ ರಾಷ್ಟ್ರ ಸಂಪತ್ತು ಹಾಳಾಗುತ್ತದೆ. ಅದಕ್ಕೆ ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ ಕಲ್ಲು ನಾಗರ ಕಂಡರೆ ಹಾಲು ನೆರೆಂಬುವರು, ದಿಟದ ನಾಗರ ಕಂಡರೆ ಕೊಲ್ಲೆಂಬರು, ಉಣ್ಣುವ ಜಂಗಮ ಬಂದರೆ ನಡೆ ಎಂಬುವರು, ಉಣ್ಣದ ಲಿಂಗಕ್ಕೆ ಬೊನವ ಹಿಡಿಯೆಂಬುವವರು…. ಎನ್ನುವ ಮಾತಿನಲ್ಲಿ ಸತ್ಯಾಂಶ ಅಡಗಿದೆ. ಸಮಾಜದಲ್ಲಿ ಎಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಅನ್ನ ದಾಸೋಹ ಮಾಡುವುದು ಎಲ್ಲಕ್ಕಿಂತ ದೊಡ್ಡದು. ಇಲ್ಲಿಯ ಬುದ್ಧಿಯ ಮಾಂಧ್ಯರ ಮಕ್ಕಳು ದೈಹಿಕ, ಮಾನಸಿಕವಾಗಿ ಸದೃಢವಾಗಬೇಕಾದರೆ, ಉತ್ತಮ ಪರಿಸರ, ಉತ್ತಮ ಆಹಾರ ಅದರ ಜೊತೆಗೆ ಪ್ರೀತಿ-ಪ್ರೇಮದಿಂದ ವರ್ತಿಸುವುದು ಬಹು ಮುಖ್ಯವಾದುದು, ಬುದ್ಧಿ ಮಾಂಧ್ಯ ಮಕ್ಕಳ ಸೇವೆ ಮಾಡುವುದೇ ದೇವರ ಸೇವೆ ಎಂದು ನುಡಿದರು.
ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ಉಮಾಕಾಂತ ಮೀಸೆಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಭಾರತ ಉತ್ತಮ ಸಂಸ್ಕøತಿ, ಪರಂಪರೆ ಮತ್ತು ಹಬ್ಬ ಹರಿದಿನಗಳ ದೇಶವಾಗಿದೆ. ಆದರೆ ನಾಗರ ಪಂಚಮಿ ದಿವಸ ಮೌಢ್ಯತೆಯಿಂದ ಹುತ್ತಿಗೆ ಹಾಲೆರೆವುದು ಮತ್ತು ಅಳ್ಳನ್ನು ಚೆಲ್ಲುವುದು ವೈಜ್ಞಾನಿಕವಾಗಿ ತಪ್ಪು. ಬಸವಾದಿ ಶರಣರು ಮೌಢ್ಯತೆಯ ಆಚರಣೆಗಳನ್ನು ವಿರೋಧಿಸುತ್ತಾರೆ, ಒಂದು ಹಸಿದ ಜೀವಿಯು ಸಂತೃಪ್ತಿ ಪಡೆಯಬೇಕಾದರೆ ಹೊಟ್ಟೆ ತುಂಬ ಆಹಾರ ನೀಡಿದ್ದಾಗ ಮಾತ್ರ ಸಮಾಧಾನದ ಜೀವನ ಸಾಗಿಸುತ್ತಾನೆ, ಅಂಥ ಹಸಿದ ಕೊಟ್ಟೆಗೆ ಅನ್ನ ಕೊಡುವುದು ಶ್ರೇಷ್ಠ ಸೇವೆ ಎಂದರು.
ವೇದಿಕೆಯ ಮೇಲೆ ಅತಿಥಿ ಸ್ವರೂಪದಲ್ಲಿ ಶಾಲೆಯ ಮೇಲ್ವಿಚಾರಕರಾದ ವಸಂತ ಜ್ಯಾಂತೆ, ಶಿಕ್ಷಕರಾದ ಮಾರುತಿ ಕಾಂಬ್ಳೆ, ಶ್ರೀಕಾಂತ ಬಿರಾದಾರ, ಸೋಮಶೇಖರ ಪಾಟೀಲ ಬಲ್ಲೂರ ಉಪಸ್ಥಿತರಿದ್ದರು. ಪ್ರಮುಖರಾದ ಸಂಗ್ರಾಮಪ್ಪಾ ಬಿರಾದಾರ, ಭೀಮಾಶಂಕರ ಬಿರಾದಾರ, ಮಲ್ಲಿಕಾರ್ಜುನ ಶಿವಪೂಜೆ, ಸಂಕೇತ ಬ್ಯಾಲಹಳ್ಳಿ, ಸಚಿನ ಮುಚಳಂಬೆ, ಶಿವರಾಜ ಹಾಗೂ ಶಾಲೆಯ ಸಿಬ್ಬಂದಿಗಳಾದ ನಜಿಮಾ, ನೂರಜಹಾ ಮತ್ತು ಶಾಹಿದ್ ರವರು ಭಾಗವಹಿಸಿದ್ದರು.