ಜಿಡಗಾ ಶ್ರೀಮಠದಲ್ಲಿ ನಾಗ ದೇವರಿಗೆ ಹಾಲೆರೆದು ಪೂಜೆ
ಆಳಂದ:ಆ.10: ಮುಗಳಖೋಡದ ಜೀಡಗಾ ಶ್ರೀಮಠದ ಪರಮಪೂಜ್ಯ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಇಂದು ಸುಕ್ಷೇತ್ರ ನವ ಕಲ್ಯಾಣ ಜೀಡಗಾ ಶ್ರೀಮಠದಲ್ಲಿ ನಾಗರ ಪಂಚಮಿಯನ್ನು ಭವ್ಯವಾಗಿ ಆಚರಿಸಿದರು. ಪರಂಪರೆಯಂತೆ, ಶ್ರೀಮಠದ ನಾಗದೇವರ ಮಹಾಸ್ವಾಮಿಗಳವರು ವಿಶೇಷ ಪೂಜೆ ಸಲ್ಲಿಸಿ ಹಾಲು ಸಮರ್ಪಿಸಿದರು.
ಈ ಪುಣ್ಯ ಸಂದರ್ಭದಲ್ಲಿ ಅನೇಕ ಭಕ್ತ ತಾಯಂದಿರು ತಮ್ಮ ಕುಟುಂಬ ಸಮೇತ ಭಾಗವಹಿಸಿದರು. ಮಕ್ಕಳಿಂದ ಪೂಜೆ ಹಾಗೂ ಶ್ರದ್ಧೆಯ ಆಚರಣೆ ಅತ್ಯಂತ ಸಂತೋಷದ ಕ್ಷಣವನ್ನಾಗಿ ಪರಿವರ್ತಿಸಿತು.
ಶಿವಯೋಗಿ ಜ್ಞಾನ ಮಂದಿರದ ಶಾಲಾ ಮಕ್ಕಳು ಪೂಜಾ ವಿಧಾನದಲ್ಲಿ ಭಾಗವಹಿಸಿ, ಸಂಭ್ರಮದಿಂದ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ಆಚರಣೆ ನಾಗರ ಪಂಚಮಿಯ ಮಹತ್ತ್ವವನ್ನು ಉಲಾಶಿಸುವಂತಹ ಕಾರ್ಯಕ್ರಮವಾಗಿದ್ದು, ಸ್ಥಳೀಯ ಜನತೆ ಹಾಗೂ ಭಕ್ತರ ಮನದಲ್ಲಿ ಸದಾ ನೆನಪಾಗುವಂತಿತ್ತು.
ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತ, “ನಾಗರ ಪಂಚಮಿ ನಮ್ಮ ಸಂಸ್ಕøತಿಯ ಬಹಳ ಪ್ರಾಚೀನ ಆಚರಣೆಗಳಲ್ಲಿ ಒಂದು. ಇದು ಪ್ರಾಣಿ, ಪ್ರಕೃತಿ, ಮತ್ತು ಪರಮಾತ್ಮನನ್ನು ಒಗ್ಗೂಡಿಸುವ ದೇವೋಪಾಸನೆಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ನಾಗದೇವತೆ ನಮಗೆ ಹಿತಕರವಾದ ಕೃಷಿ, ಆರೋಗ್ಯ, ಮತ್ತು ಸಂತೋಷದೊಂದಿಗೆ ನಮ್ಮ ಜೀವನವನ್ನು ಸಮೃದ್ಧಗೊಳಿಸಲು ಅನುಗ್ರಹಿಸುತ್ತಾರೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದು ಬಂದಿದೆ ಎಂದು ಹೇಳಿದರು.
ಪವಿತ್ರ ನಾಗರ ಪಂಚಮಿ ಈ ದಿನ, ನಾವು ನಮ್ಮ ಮನಸ್ಸು ಮತ್ತು ಮನವನ್ನು ಶುದ್ಧಗೊಳಿಸಿ, ನಾಗದೇವರನ್ನು ಪೂಜಿಸುತ್ತೇವೆ. ಈ ಪೂಜೆಯ ಮಹತ್ವವನ್ನು ನಾವು ಎಲ್ಲರಿಗೂ ತಲುಪಿಸಬೇಕು. ಪ್ರಾಣಿ ಮತ್ತು ಪ್ರಕೃತಿಯ ರಕ್ಷಣೆ ನಮ್ಮ ಕರ್ತವ್ಯವಾಗಿದ್ದು, ನಾಗರ ಪಂಚಮಿಯು ನಮ್ಮ ಜೀವನದ ಈ ಸತ್ಯವನ್ನು ಮತ್ತೆ ನೆನಪಿಸುತ್ತದೆ. ನಾಗದೇವರ ಆಶೀರ್ವಾದದಿಂದ ನಮ್ಮ ಸಮಾಜದಲ್ಲಿ ಶಾಂತಿ, ಸಮೃದ್ಧಿ, ಮತ್ತು ಸಂತೋಷವಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮಗೆಲ್ಲರಿಗೆ ನಾಗರ ಪಂಚಮಿಯ ಶುಭಾಶಯಗಳು,” ಎಂದು ಅವರು ಭಕ್ತರಿಗೆ ಆಶೀರ್ವಚನ ನೀಡಿದರು.
ನಾಗದೇವರ ಪೂಜೆಯಲ್ಲಿ ತಾಯಂದಿರು, ಮಕ್ಕಳು ಸೇರಿ ಹಾಲೆರೆದು ಪೂಜೆ ಪ್ರಸಾದ ಸ್ವೀಕರಿಸಿದರು.
ಬಸವರಾಜ ಚೋಪಾಟೆ, ಯಲ್ಲಾಲಿಂಗ ಸಲಗರ, ರೇವಯ್ಯಾ ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.