ಜೈವಿಕ ಇಂಧನಗಳ ಉತ್ಪಾದನೆಯತ್ತ ರಾಷ್ಟ್ರಗಳು ಕಾರ್ಯನಿರ್ವಹಿಸಲಿ
ಕಲಬುರಗಿ:ಆ.10: ಕಲ್ಲಿದ್ದಲು, ಪೆಟ್ರೋಲಿಯಂ, ಉಷ್ಣಶಕ್ತಿಯಂತಹ ಇಂಧನಗಳ ನಿರಂತರ ಬಳಕೆಯಿಂದ ಬರಿಗಾಗುವ ಸ್ಥಿತಿಯಲ್ಲಿವೆ. ಆದ್ದರಿಂದ ಜೈವಿಕ ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಅದರ ಮೂಲಗಳ ಬಗ್ಗೆ ವ್ಯಾಪಕ ಸಂಶೋಧನೆ ಮಾಡುವ ಮೂಲಕ ಉತ್ಪಾದನಾ ಪ್ರಮಾಣ ಅಧಿಕಗೊಳಿಸುವತ್ತ ಎಲ್ಲಾ ರಾಷ್ಟ್ರಗಳು ಕಾರ್ಯನಿರ್ವಹಿಸಬೇಕಾದದ್ದು ಪ್ರಸ್ತುತ ಅವಶ್ಯಕವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಶಿವಲಿಂಗ ನಗರದಲ್ಲಿರುವ ‘ಮಹಾತ್ಮ ಕಾನ್ವೆಂಟ್ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಜೈವಿಕ ಇಂಧನ ದಿನಾಚರಣೆ’ಯ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಜೈವಿಕ ಇಂಧನ ಭವಿಷ್ಯದ ಇಂಧನವಾಗಿದೆ. ಪರಿಸರಕ್ಕೆ ಪೂರಕವಾಗಿದೆ. ಭಾರತವು ಸಂಪತ್ಭರಿತ ರಾಷ್ಟ್ರವಾಗಿದ್ದು, ಕೃಷಿ, ಅರಣ್ಯ ತ್ಯಾಜ್ಯ, ಹೊಂಗೆ, ಜಟ್ರೋಫಾ ಮರದಿಂದ ಜೈವಿಕ ಇಂಧನದ ತಯಾರಿಕೆಯ ಪ್ರಮಾಣ ಹೆಚ್ಚಾಗಬೇಕು. ಇದನ್ನು ಯೋಜನಾಬದ್ಧವಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರಸ್ತುತವಾಗಿ ಜೈವಿಕ ಇಂಧನಗಳ ಬಳಕೆ ಶೇ.3ರಷ್ಟಿದ್ದು, 2050ಕ್ಕೆ ಅದರ ಪ್ರಮಾಣ ಶೇ.25ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಈರಣ್ಣ ಎಂ.ಹಳ್ಳದ ಮಾತನಾಡಿ, ನೈಸರ್ಗಿಕ ಇಂಧನಗಳನ್ನು ಪ್ರತಿಯೊಬ್ಬರು ಸಂರಕ್ಷಿಸಬೇಕು. ಇಂಧನವನ್ನು ಹಿತ-ಮಿತವಾಗಿ ಬಳಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಬಂಡಿ, ಶಿಕ್ಷಕರಾದ ಲಕ್ಷ್ಮೀ ಗೊಮದ್, ವೈಷ್ಣವಿ ಸೋನಾರ, ವೈಷ್ಣವಿ ಪಾಟೀಲ, ಸೇವಕಿ ಮಾಣಿಕಮ್ಮ ಕ್ಷೇತ್ರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.