ಯೋಧನ ಸಾವು : ದುಃಖದಲ್ಲಿ ಮುಳುಗಿದ ಕಟಗೇರಿ ಗ್ರಾಮ
ಗುಳೇದಗುಡ್ಡ,ಆ.10: ಭಾರತೀಯ ಸೇನೆಯ ಬಿಎಸ್‍ಎಫ್ 05 ಬಟಾಲಿಯನ್‍ನಲ್ಲಿ ಯೋಧನಾಗಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಟಗೇರಿ ಗ್ರಾಮದ ಸೈನಿಕ ಉಮೇಶ ಅಖಂಡಪ್ಪ ಡಬಗಲ್ಲ (33) ನಿಧನ ಹೊಂದಿದ್ದು, ಯೋಧನ ಪಾರ್ಥಿವ ಶರೀರ ಶುಕ್ರವಾರ ಸ್ವಗ್ರಾಮಕ್ಕೆ ಆಗಮಿಸುತ್ತಿದಂತೆ ಇಡೀ ಗ್ರಾಮವೇ ದುಃಖದದಲ್ಲಿ ಮುಳುಗಿತ್ತು. ಕಟಗೇರಿ ಗ್ರಾಮದ ಗ್ರಾಮಪಂಚಾಯತಿಯ ಪಕ್ಕದ ಎಪಿಎಂಸಿ ಆವರಣದಲ್ಲಿ ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವದೊಂದಿಗೆ ನೇರವೇರಿಸಲಾಯಿತು. ಯೋಧನ ಗೌರವಾರ್ಥವಾಗಿ ಪೋಲಿಸ್ ಇಲಾಖೆಯವರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.
ಯೋಧ ಉಮೇಶ ಡಬಗಲ್ಲ ಅವರ ಪಾರ್ಥಿವ ಶರೀರ ಶುಕ್ರವಾರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಟಗೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು, ವಿದ್ಯಾರ್ಥಿಗಳು, ನಿವೃತ್ತ ಸೈನಿಕರು ಆಗಮಿಸಿ, ಮಡಿದ ಯೋಧನಿಗೆ ನಮನ ಸಲ್ಲಿಸಿ ಉಮೇಶ ಅಮರರಹೇ?. ಭಾರತಮಾತಾಕೀ ಜೈ ಎಂದು ಘೋಷಣೆಗಳು ಮೊಳಗಿಸಿದರು.
ಕುಟುಂಬದ ಆಕ್ರಂದನ: ಯೋಧ ಉಮೇಶ ಅವರ ಮೃತಪಟ್ಟಿರುವ ಸುದ್ದಿ ತಿಳಿದ ಎರಡು ದಿನಗಳಿಂದ ಯೋಧನ ಕುಟುಂಬ ಕಣ್ಣೀರನಲ್ಲಿ ಮುಳುಗಿತ್ತು. ಶುಕ್ರವಾರ ಯೋಧನ ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಬಂಧುಬಳಗದವರು, ಗ್ರಾಮಸ್ಥರು ಸೇರಿದಂತೆ ಅಪಾರ ಜನಸ್ಥೋಮ ದುಃಖದ ಮಡುವಿನಲ್ಲಿದ್ದರು.
ಸಾಂತ್ವನ ಹೇಳಿದ ಡಿಸಿ: ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರು ಉಮೇಶ ಅವರ ಪತ್ನಿ, ತಂದೆ, ತಾಯಿಗೆ ಸ್ವಾಂತನ ಹೇಳಿ, ಯೋಧ ಉಮೇಶ ಅವರು ದೇಶರಕ್ಷಣೆಗೆ ತಮ್ಮ ಪ್ರಾಣವನ್ನು ಮುಡುಪಿಟ್ಟಿದ್ದರು. ಅವರ ಅಗಲಿಕೆಯಿಂದ ನಮಗೆ ದುಃಖ ತಂದಿದೆ. ಆ ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ. ಇಡೀ ಜಿಲ್ಲಾಡಳಿತ ನಿಮ್ಮೊಂದಿಗಿದೆ ಎಂದು ಸ್ವಾಂತನ ಹೇಳಿ ಅಗಲಿದ ಯೋಧನಿಗೆ ಗೌರವ ಸಲ್ಲಿಸಿದರು.
13 ವರ್ಷ ದೇಶ ಸೇವೆ : ಕಟಗೇರಿಯ ಗ್ರಾಮದ ಬಿಎಸ್‍ಎಫ್ ಯೋಧ ಉಮೇಶ ಡಬಗಲ್ಲ ಅವರು 13 ವರ್ಷಗಳಲ್ಲಿ ಆಸ್ಸಾಂ, ಗುಜರಾತ, ಪಂಜಾಬ, ಜಮ್ಮುಕಾಶ್ಮೀರ ಸೇವೆಸಲ್ಲಿಸಿದ್ದು ಈಗ ಪ್ರಸ್ತುತ ಪಶ್ಚಿಮಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸೇವಾವಧಿ ಇನ್ನೂ 7 ವರ್ಷ ಬಾಕಿ ಇತ್ತು.
ಪಂಚಭೂತಗಳಲ್ಲಿ ವಿಲೀನ: ಯೋಧನ ಪಾರ್ಥಿವ ಶರೀರ ಮನೆಯ ಬಳಿ ಆಗಮಿಸಿತು, ಬಳಿಕ ಗ್ರಾಮದ ಮಹಾಧ್ವಾರದ ಮೂಲಕ ಮೆರವಣಿಗೆಯ ಮೂಲಕ ಹಾಯ್ದು ಗ್ರಾಮದ ಸಭಾಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಇರಿಸಲಾಯಿತು. ಸಂಜೆ ಯೋಧನ ಅಂತ್ಯಸಂಸ್ಕಾರ ಮಾಡಲಾಯಿತು.
ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ ದೇಸಾಯಿ, ಬಿಎಸ್‍ಎಫ್ ಬಟಾಲಿಯನ್‍ನ ಸಬ್ ಇನ್ಸ್‍ಪೆಕ್ಟರ್ ಸಂತೋಷ ವಾಘ, ಪುಷ್ಪೇಂದ್ರ ಸಿಂಗ್, ತಹಸೀಲ್ದಾರ ಮಂಗಳಾ ಎಂ, ಡಿವೈಎಪಿ ವಿಶ್ವನಾಥ ಕುಲಕರ್ಣಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ರತ್ನಮ್ಮ ಚಿಮ್ಮನಕಟ್ಟಿ, ಸಿಪಿಐ ಕರಿಯಪ್ಪ ಬನ್ನೆ, ಪಿಡಿಓ ರಾಮಚಂದ್ರ ಮೇತ್ರಿ, ಕಂದಾಯ ನಿರೀಕ್ಷಕ ಎಸ್.ಎಸ್. ಜೋಗಿನ, ಪಿಎಸ್‍ಐ ರಾಜು ಬೀಳಗಿ, ಗ್ರಾಪಂ ಅಧ್ಯಕ್ಷ ಸುಮಿತ್ರಾ ದ್ಯಾವನ್ನವರ, ಉಪಾಧ್ಯಕ್ಷ ರಾಮಚಂದ್ರ ಡೋಣಿ, ಸದಸ್ಯರಾದ ಉಮೇಶ ಮೊಖಾಶಿ, ಬಿ.ಜಿ.ಪೂಜಾರ, ಟಿ,ಎಸ್. ಮುಖಾಶಿ, ಬಿ.ಎಸ್. ಹದ್ಲಿ, ಪಿ.ಕೆ. ಪಾಟೀಲ, ಡಿ.ಕೆ. ಮೇಟಿ, ಎಸ್.ಜಿ.ಶಿವಪ್ಪಯ್ಯನಮಠ, ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಕೋಟಿ, ವಿ.ಎಸ್. ಹಿರೇಮಠ ಸೇರಿದಂತೆ ಕಟಗೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಮಾಜಿ ಸೈನಿಕರು, ಭಾಗವಹಿಸಿದ್ದರು.