ಸಂಭ್ರಮದ ನಾಗರಪಂಚಮಿ ಆಚರಸಿದ ಭಕ್ತರು- ನೈವೇದ್ಯಕ್ಕೆ ಎಳ್ಳು ಸಿಗಳೆ ಸಮರ್ಪಣೆ
ಸಂಜೆವಾಣಿ ವಾರ್ತೆ
ಸಂಡೂರು: ಅ:10:  ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಾಗಚೌತಿಗೆ ಹಾಗೂ ಪಂಚಮಿಗೆ ವಿಶೇಷವಾದ ಹಬ್ಬ ನಾಗರಪಂಚಮಿಯಾಗಿದ್ದು ವಿಶೇಷವಾದ ಪೂಜೆಗಳೊಂದಿಗೆ ಅದ್ದೂರಿಯಾಗಿ ಆಚರಿಸಿದರು.
ತಾಲೂಕಿನ ಯಶವಂತನಗರ, ತಾರಾನಗರ, ತೋರಣಗಲ್ಲು, ಚೋರನೂರು ಬಂಡ್ರಿ, ಬೊಮ್ಮಘಟ್ಟಗಳಲ್ಲಿ  ಹಾಗೂ ಸಂಡೂರು ಪಟ್ಟಣದಲ್ಲಿಯೂ ಸಹ ವಿಶೇಷವಾಗಿ ನಾಗಪ್ಪನಿಗೆ ಹಾಲೆರದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪಟ್ಟಣದ ಶಿಕ್ಷಕರ ಕಾಲೋನಿಯ ಜೋಗಿಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಬೆಳಗಿನಿಂದಲೇ ಭಕ್ತರು ನಾಗಪ್ಪನಿಗೆ ಮಡಿಹಾಲು, ಗಾರಿಗೆ, ಉಂಡೆ, ಹಾಗೂ ಹೊಬ್ಬಟ್ಟಿನ ನೈವೇದ್ಯ ಸಿದ್ದಪಡಿಸಿಕೊಂಡು ಅಗಮಿಸಿದ್ದರು, ಅಲ್ಲದೆ ಅಲಂಕಾರ ರೀತಿಯಲ್ಲಿ ನಾಗಪ್ಪನ ದಾರ, ಬತ್ತಿಯ ವಿಶೇಷ ಎಳೆಗಳನ್ನು ಸಿದ್ದಪಡಿಸಿಕೊಂಡು ನಾಗಪ್ಪನಿಗೆ ವಿಶೇಷ ಪೂಜೆ ಹಾಗೂ ಹಾರಗಳನ್ನು ಹಾಕಿ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಹಾಲೆರದರು, ಅಲ್ಲದೆ ಈ ಸಂದರ್ಭದಲ್ಲಿ ಇಡೀ ಕುಟುಂಬದ ಸದಸ್ಯರ ಹೆಸರನ್ನು ಸ್ಮರಿಸಿ ಹಾಲೆರೆಯುವುದು ಬಹು ವಿಶೇಷವಾಗಿ ಕಂಡುಬಂದಿತು.
ಈ ಸಂದರ್ಭದಲ್ಲಿ ನಾಯಿಗಳ ಹಾವಳಿಯಿಂದ ಭಕ್ತರು ಭಯದಿಂದಲೇ ಹಾಲೆರದರು, ಕಾರಣ ನಾಯಿಗಳು ನೈವೇದ್ಯದ ತಟ್ಟೆಗಳನ್ನು ಹೊತ್ತುಕೊಂಡು ಹೋಗುವ ಭಯ ಒಂದುಭಾಗವಾದರೆ ಮತ್ತೊಂದು ಕಡೆ ಅವುಗಳಿಗೂ ಅರ್ಪಿಸಲು ಸಹ ಸಿದ್ದತೆ ಮಾಡಿ ಬಾಳೆಹಣ್ಣುಗಳನ್ನು ಎಸೆದು ಅರ್ಪಿಸಿದರು. ನಾಗಪಂಚಮಿಯ ಹಬ್ಬದಲ್ಲಿ ಸಹೋದರ ಬಾಂಧವ್ಯ ಬೆಸೆಯುವ ರೀತಿಯಲ್ಲಿ ಅಣ್ಣ, ತಂಗಿ, ಸಹ ಜೊತೆಗೆ ಹಾಲೆರೆದರೆ, ನವದಂಪತಿಗಳು ಸಹ ಪೂಜೆ ಸಲ್ಲಿಸಿದರು.
ಪಟ್ಟಣದಲ್ಲಿ ಶಂಕರಮಠದ ಹತ್ತಿರ, ಹೊಸಬಾವಿ ಓಣಿಯಲ್ಲಿ ಮರಾಠ ಸಮಾಜದ ಹತ್ತಿರ, ಬ್ರಾಹ್ಮಣದ ಬೀದಿಯ ಹತ್ತಿರ, ಅನಂದಬಜಾರ್, ಶಿಕ್ಷಕರ ಕಾಲೋನಿಯಲ್ಲಿ, ಸುಭಾಷ್‍ನಗರದಲ್ಲಿ , ಸ್ಮಯೋರ್ ಕಾಲೋನಿಯ ಶ್ರೀಶೈಲೇಶ್ವರ ಶಾಲೆಯ ಹತ್ತಿರದಲ್ಲಿ ನಾಗಪ್ಪನಿಗೆ ಹಾಲನ್ನು ಹಾಕಿ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.