ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ
ಬಾಗಲಕೋಟೆ,ಆ.10: `ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಅವಿಷ್ಕಾರಗಳಾಗಿವೆ. ಕಾಯಿಲೆಗಳಿಗೆ ಸೂಕ್ತ ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಸಂಶೋಧನೆಯ ಪರಿಣಾಮ ಕ್ಯಾನ್ಸರ್ ರೋಗ ಕೂಡ ಈಗ ಗುಣಪಡಿಸಬಹುದಾದ ಕಾಯಿಲೆಯಾಗಿದೆ’ ಎಂದು ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಎಮ್.ಸಜ್ಜನ (ಬೇವೂರ) ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ, ಪಿ.ಎಮ್.ಎನ್.ಎಮ್ ಡೆಂಟಲ್ ಕಾಲೇಜು ಮತ್ತು ಹುಬ್ಬಳ್ಳಿಯ ಹೆಲ್ತ್‍ಕೇರ್ ಗ್ಲೋಬಲ್ ಎಂಟರ್‍ಪ್ರೈಜೆಸ್ (ಎಚ್.ಸಿ.ಜಿ) ಸಹಯೋಗದಲ್ಲಿ ಆಯೋಜಿಸಲಾದ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರಕ್ಕೆ ಬಾಗಲಕೋಟೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ತಪಾಸಣೆಗಾಗಿ ಸುಮಾರು 100 ಕ್ಕೂ ಹೆಚ್ಚು ರೋಗಿಗಳು ಆಗಮಿಸಿದ್ದರು. ಎಚ್.ಸಿ.ಜಿ ಕ್ಯಾನ್ಸರ್ ಕೇಂದ್ರದ ತಜ್ಞವೈದ್ಯರಾದ ಡಾ.ಮಿಲಿಂದ ಶೆಟ್ಟಿ, ಕುಮಾರೇಶ್ವರ ಆಸ್ಪತ್ರೆಯ ಒ.ಬಿ.ಜಿ ವಿಭಾಗದ ಡಾ.ಆಶಾಲತಾ ಮಲ್ಲಾಪೂರ, ಸರ್ಜರಿ ವಿಭಾಗದ ಡಾ.ಈಶ್ವರ ಕಲಬುರ್ಗಿ, ಇ.ಎನ್.ಟಿ ವಿಭಾಗದ ಡಾ.ಸಿ.ಎಸ್.ಹಿರೇಮಠ, ಡೆಂಟಲ್ ಕಾಲೇಜಿನ ಡಾ.ಪ್ರವೀಣ ರಾಮದುರ್ಗ, ಡಾ.ಗಂಗಾಧರ ಅಂಗಡಿ ಮತ್ತು ಡಾ.ಸಂತೋಷ ಗುಡಿ ಅವರು ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ಕಾಯಿಲೆ ತಪಾಸಣೆ ಮಾಡಿದರು.