ಎಲ್ ಎಲ್ ಸಿ ಕಾಲುವೆಯ ಬಾಗೇವಾಡಿ ಉಪಕಾಲುವೆ:ಅನಧಿಕೃತ ನೀರಾವರಿ ಸಂಪರ್ಕ ಪಡೆದಲ್ಲಿ ಕಾನೂನು ಕ್ರಮ
ಸಿರುಗುಪ್ಪ ಆ 10: ಅನಧಿಕೃತ ಪಂಪ್ ಸೆಟ್ ಹಾಗೂ ಅಕ್ರಮವಾಗಿ ಪೈಪ್ ಲೈನ್ ಸಂಪರ್ಕ ಪಡೆದುಕೊಂಡ ರೈತರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸಿ ಪಿ ಐ ಸುಂದರೇಶ್ ಹೊಳೆಣ್ಣವರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ತುಂಗಭದ್ರಾ ಕೆಳಮಟ್ಟದ ಕಾಲುವೆ ಬಾಗೇವಾಡಿ ಉಪಕಾಲುವೆಯ ಮೇಲ್ಭಾಗದಲ್ಲಿ ಅನಧಿಕೃತ ಹಾಗೂ ಅಕ್ರಮ ಪೈಪ್ ಲೈನ್ ತಡೆಗಟ್ಟುವ ನಿಟ್ಟಿನಲ್ಲಿ ರೈತರ ಸಭೆಯಲ್ಲಿ ಮಾತನಾಡಿದರು.
ಕೊಂಚಗೇರಿ, ದಾಸಾಪುರ ಹಾಗೂ ಸಿರಿಗೇರಿ ಭಾಗದ ರೈತರು
ಅಕ್ರಮವಾಗಿ ನೀರಾವರಿ ಸಂಪರ್ಕ ಪಡೆದು ಕಾಲುವೆ ಕೆಳಭಾಗದ ತೆಕ್ಕಲಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ, ಹಳೇಕೋಟೆ ಗ್ರಾಮಗಳ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರಿಲ್ಲದಂತಾಗಿದೆ ಎಂದು ತಿಳಿಸಿದರು.
ಅಕ್ರಮ ಪಂಪ್ ಸೆಟ್ ಹಾಗೂ ಪೈಪ್ ಲೈನ್ ಹಾವಳಿಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸಿಗುತ್ತಿಲ್ಲ, ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ನೆಣಿಕೆಪ್ಪ ಒತ್ತಾಯಿಸಿದರು.
ಸಭೆಯಲ್ಲಿ ನೀರಾವರಿ ಇಲಾಖೆಯ ಎಇಇ ತಿಪ್ಪೇಸ್ವಾಮಿ, ತೆಕ್ಕಲಕೋಟೆ ಪಿ ಎಸ್ ಐ ಶ್ರೀನಿವಾಸ, ಸಿರಿಗೇರಿ ಪಿ ಎಸ್ ಐ ಸದ್ದಾಂ ಹುಸೇನ್, ರೈತ ಮುಖಂಡರಾದ ನರೇಂದ್ರ ಸಿಂಹ, ನೆಣಿಕಪ್ಪ, ವೆಂಕಟೇಶ, ಕೊಮಾರೆಪ್ಪ ಇದ್ದರು.