ಮಳೆ ಇಲ್ಲದಿದ್ದರೂ ಅರಣ್ಯ ಭಾಗದ ಗುಡ್ಡದಿಂದ ಹರಿದು ಬರುತ್ತಿದೆ ಕೆಸರು ಮಿಶ್ರಿತ ನೀರು
ಸುಳ್ಯ:ಮಳೆ ಇಲ್ಲದಿದ್ದರೂ ಕಳೆದ ೩-೪ ದಿನಗಳಿಂದ ಅರಣ್ಯ ಭಾಗದ ಗುಡ್ಡ ಪ್ರದೇಶದಿಂದ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿರುವ ಘಟನೆ ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕಣಕ್ಕೂರು ಎಂಬಲ್ಲಿ ನಡೆದಿದೆ.
ಸುಳ್ಯ-ಬಂದಡ್ಕ ರಸ್ತೆಯ ಕನಕ್ಕೂರು ಎಂಬಲ್ಲಿ ಮುಖ್ಯ ರಸ್ತೆಗೆ ಅರಣ್ಯ ಭಾಗದಿಂದ ನೀರು ಹರಿದುಬರುತ್ತಿದ್ದು, ಸಾಮಾನ್ಯ ದಿನಗಳಲ್ಲಿ ಈ ನೀರು ಸ್ವಚ್ಛಂದವಾಗಿ ಹರಿದುಬರುತ್ತಿದ್ದು, ಆದರೆ ಕಳೆದ ೩-೪ ದಿನಗಳಿಂದ ನಿರಂತರ ಮಣ್ಣು, ಕೆಸರು ಮಿಶ್ರಿತ ನೀರು ಹರಿದು ಬರುತ್ತಿದ್ದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಮುಖ್ಯ ರಸ್ತೆಯಿಂದ ಸುಮಾರು ೧೫೦-೨೦೦ ಮೀಟರ್ ದೂರದ ಅರಣ್ಯ ಭಾಗದಿಂದ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದ್ದು, ಅಲ್ಲಿ ನೀರು ಮಣ್ಣಿನಾಳದಿಂದ ಮಣ್ಣಿನ ಜೊತೆಗೆ ಒರತೆಯಂತೆ ಬರುತ್ತಿರುವುದು ಕಂಡುಬರುತ್ತಿದೆ. ಕೆಸರು ಮಿಶ್ರಿತ ನೀರು ಹರಿದು ಬರುತ್ತಿರುವ ಜಾಗದಲ್ಲಿ ಕೆಸರು ಮಿಶ್ರಿತ ಅಂಟು ಮಣ್ಣು ಕಂಡುಬರುತ್ತಿದೆ. ಇದೇ ಪರಿಸರದ ಬೇರೆ ಕಡೆಗಳಲ್ಲಿ ಸ್ವಚ್ಛಂದ ತಿಳಿ ನೀರು ಹರಿಯುತ್ತಿದೆ. ಮಳೆಗಾಲದಲ್ಲಿ ಮಾತ್ರವೇ ಇಲ್ಲಿ ಒರತೆ ನೀರು ಅರಣ್ಯ ಭಾಗದಿಂದ ಹರಿಯುತ್ತಿದ್ದು, ಮುಂದಕ್ಕೆ ಅದು ಪಯಸ್ವಿನಿಗೆ ಸೇರುತ್ತಿದೆ. ಆದರೆ ಇದೀಗ ಕೆಸರು ಮಿಶ್ರಿತ ನೀರು ಹರಿದು ಬರುತ್ತಿರುವುದು ವಿವಿಧ ಊಹಾ-ಪೋಹಗಳಿಗೆ ಕಾರಣವಾಗಿದೆ.
ಸ್ಥಳೀಯ ನಿವಾಸಿ ಶೀಲಾವತಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ೨-೩ ವರ್ಷಗಳ ಹಿಂದೆ ಇದೇ ರೀತಿ ಕೆಸರು ಮಿಶ್ರಿತ ನೀರು ಹರಿದು ಬರುತ್ತಿತ್ತು. ಆದರೆ ಈ ವರ್ಷ ಅಂದಿಗಿಂತ ಹೆಚ್ಚಿನ ನೀರು ಬರುತ್ತಿದ್ದು, ಈ ಬಗ್ಗೆ ಗ್ರಾ.ಪಂ.ಗೆ ತಿಳಿಸಿದ್ದೇವೆ. ಗ್ರಾಮ ಆಡಳಿತಾಧಿಕಾರಿ ಅವರು ಮತ್ತಿತರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದಿದ್ದಾರೆ.