ಪ್ಯಾನ್ ಇಂಡಿಯಾ ಅಭಿಯಾನಕ್ಕೆ ಚಾಲನೆ
ಬಾಗಲಕೋಟೆ,ಆ10 : ಕಾರ್ಮಿಕ ಇಲಾಖೆಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ 31 ವರೆಗೆ ಹಮ್ಮಿಕೊಂಡ ಪ್ಯಾನ್ ಇಂಡಿಯಾ, ಮಕ್ಕಳ ಮತ್ತು ಹದಿಹರೆಯದ ಕಾರ್ಮಿಕರ ಪುನರ್ವಸತಿ ಕುರಿತ ಜಾಗೃತಿ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ ಕಾರ್ಮಿಕ ನಿರ್ಮೂಲನೆಗೆ ಕಠಿಣ ಕಾನೂನುಗಳು ಇದ್ದರೂ ಸಹ ಇನ್ನು ಹೋಟೆಲ್, ಪೆಟ್ರೋಲ್ ಬಂಕ್ ಹಾಗೂ ಇತರೆ ಸ್ಥಳಗಳಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲಾಖೆಯವರು ಕಾನೂನನ್ನು ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಂಡು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಪಣ ತೊಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ವಕೀಲರಾದ ರಮೇಶ ಬದ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಾಗೃತಿ ಅಭಿಯಾನ ಆಗಸ್ಟ 31 ವರೆಗೆ ಜರುಗಲಿದೆ.