ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯ ನಾಗರಪಂಚಮಿ
ಪುತ್ತೂರು: ಪುತ್ತೂರು ತಾಲೂಕಿನ ಎಲ್ಲಾ ಕಡೆಗಳಲ್ಲಿ ಶುಕ್ರವಾರ ನಾಗ ಸನ್ನಿಧಿಗಳಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿಯ ಆಚರಣೆ ನಡೆಯಿತು. ನಾಗಾರಾಧನೆಗೆ ವರುಣನೂ ಕೃಪೆತೋರಿದ ಪರಿಣಾಮ ಬಿಸಿಲಿನ ವಾತಾವರಣ ಕಂಡುಬಂತು.
ನಾಗರ ಪಂಚಮಿಯಂದು ನಾಗನಿಗೆ ಎರೆದ ಹಾಲು ಹರಿದು ಕಡಲು ಸೇರಬೇಕು ಎಂಬ ನಂಬಿಕೆ ತುಳುನಾಡಿನ ಭಕ್ತರಲ್ಲಿದೆ. ಆದರೆ ಶುಕ್ರವಾರ ಮಳೆ ಬಿಡುವು ಪಡೆದಿತ್ತು. ಹೆಚ್ಚಾಗಿ ಬಯಲು ಗುಡಿಗಳ ಮುಂದೆ ನಾಗರ ಪಂಚಮಿ ಆಚರಣೆ ನಡೆಯುವುದರಿಂದ ಭಕ್ತರಿಗೆ ಆರಾಧನೆಗೆ ಸೇರಿಕೊಳ್ಳಲು ಅನುಕೂಲವೂ ಆಯಿತು.
ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಮೂಲನಾಗನ ಸನ್ನಿಧಿಯಲ್ಲಿ ಶುಕ್ರವಾರ ಪ್ರಾತ:ಕಾಲ ನಾಗನಿಗೆ ಹಾಲು, ಎಳನೀರು ಅಭಿಷೇಕ ನೆರವೇರಿತು. ಜತೆಗೆ ದೇವಾಲಯದ ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಸೀಮೆಯ ಭಕ್ತರಿಂದ ನಾಗದೇವರಿಗೆ ಅಭಿಷೇಕ, ಹಣ್ಣುಕಾಯಿ, ಅರಶಿನ ಸಮರ್ಪಣೆ ನಡೆಯಿತು. ಸಾವಿರಾರು ಭಕ್ತರು ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ವಾಸುಕೀ ನಾಗರಾಜ ಸನ್ನಿಧಿಯಲ್ಲಿ ನಾಗದೇವರಿಗೆ ಸೇವೆ ಸಲ್ಲಿಸಿದರು. ಬೆಳಗ್ಗಿನಿಂದಲೇ ದೇವಾಲಯದ ಪರಿಸರದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರ ಸಂದಣಿ ಕಂಡುಬಂತು.
ಸೇವೆಗಳು
ತಾಲೂಕಿನ ನಗರ ಹಾಗೂ ಗ್ರಾಮಾಂತರದ ದೇವಾಲಯ, ನಾಗನಕಟ್ಟೆ, ತರವಾಡುಗಳ ನಾಗನಕಟ್ಟೆ, ಗ್ರಾಮಗಳ ನಾಗ ಸನ್ನಿಧಿಗಳಲ್ಲಿ ಭಕ್ತಿಯ ಪೂಜೆ, ಪುರಸ್ಕಾರ, ತಂಬಿಲ ಸೇವೆಗಳು ನಡೆದವು. ತಾಲೂಕಿನ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಾಗ ಸನ್ನಿಧಿ, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಉರ್ಲಾಂಡಿ ರಕ್ತೇಶ್ವರಿ ನಾಗನಕಟ್ಟೆ, ಶಾಂತಿಮೊಗರು ಸುಬ್ರಹ್ಮಣ್ಯ ದೇವಸ್ಥಾನ, ಉಪ್ಪಿನಂಗಡಿ ಪದಾಳ ಸುಬ್ರಹ್ಮಣ್ಯ ದೇವಸ್ಥಾನ, ಬೆಳ್ಳಿಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ, ಬಾಯಂಬಾಡಿ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಪಾಣಾಜೆ ರಣಮಂಗಲ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ನಳೀಲು ಸುಬ್ರಹ್ಮಣ್ಯ ದೇವಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದ ನಾಗನಕಟ್ಟೆ ಸೇರಿದಂತೆ ವಿವಿಧ ನಾಗದೇವರ ಸ್ಥಾನಗಳಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಗ್ರಾಮೀಣ ಭಾಗಗಳಲ್ಲಿ ತರವಾಡುಮನೆಗಳಲ್ಲಿ ಹಾಗೂ ರೈತವರ್ಗ ತಮ್ಮ ಭೂಮಿಯಲ್ಲಿರುವ ನಾಗಸನ್ನಧಿಗಳಲ್ಲಿ ನಾಗರಪಂಚಮಿಯ ಪ್ರಯುಕ್ತ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಬಜತ್ತೂರು ಗ್ರಾಮದ ಮಣಿಕ್ಕಳಬೈಲಿನಲ್ಲಿ ಗ್ರಾಮಸ್ಥರ ಉಪಸ್ಥಿತಿಯೊಂದಿಗೆ ಗುತ್ತಿಮಾರು ಎಂಬಲ್ಲಿನ ನಾಗಸನ್ನಿಧಿಯಲ್ಲಿ ನಾಗತಂಬಿಲ ನಡೆಯಿತು.
ದೇವರಿಗೆ ಸಮರ್ಪಣೆ
ನಾಗಸನ್ನಿಧಿಗಳಲ್ಲಿ ದೇವರಿಗೆ ಹಾಲು, ಸೀಯಾಳಾಭಿಷೇಕಗಳು ನಡೆದವು. ಭಕ್ತರು ಹಾಲು, ಸೀಯಾಳವನ್ನು ಸಮರ್ಪಿಸಿ ಪ್ರಸಾದ ರೂಪದ ತೀರ್ಥವನ್ನು ಸ್ವೀಕರಿಸಿದರು. ಜತೆಗೆ ಕೇದಗೆ, ಹಿಂಗಾರವನ್ನೂ ದೇವರಿಗೆ ಸಮರ್ಪಿಸಿ ತಮ್ಮ ಇಷ್ಟಾರ್ಥ ನೆರವೇರಿಸಲು ಪ್ರಾರ್ಥನೆ ಸಲ್ಲಿಸಿದರು.
ನಾಗಪಂಚಮಿಯ ವಿಶೇಷವಾಗಿ ತುಳುನಾಡಿನ ಪ್ರತಿಮನೆಗಳಲ್ಲಿಯೂ ಅರಶಿನ ಎಲೆಯಲ್ಲಿ ಸಿಹಿಗಟ್ಟಿ(ತಿಂಡಿ) ತಯಾರಿಸಿ ಮನೆಮಂದಿ ಸೇರಿ ಸವಿದರು.