ಪುತ್ತೂರಿನ ‘ನೇತ್ರಾಜಂಬೊ- ನೇತ್ರಾಗಂಗಾ’ ನೂತನ ಗೇರು ತಳಿಗಳು; ಇಂದು ಪ್ರಧಾನಮಂತ್ರಿಗಳಿಂದ ಬಿಡುಗಡೆಯಾಗಲಿವೆ
ಪುತ್ತೂರು; ಆಗಸ್ಟ್ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ೧೦೯ ತೋಟಗಾರಿಕಾ ಬೆಳೆಗಳ ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಲಿದ್ದು, ಇದರಲ್ಲಿ ಪುತ್ತೂರು ರಾಷ್ಟ್ರೀಯ ಗೇರುಅಭಿವೃದ್ಧಿ ಕೇಂದ್ರ ಅಭಿವೃದ್ಧಿ ಪಡಿಸಿರುವ ನೇತ್ರಾ ಜಂಬೊ-೧ ಹಾಗೂ ನೇತ್ರಾ ಗಂಗಾ ತಳಿಗಳು ಸೇರಿವೆ. ಆ.೧೧ರಂದು ೧೧ ಗಂಟೆಗೆ ಈ ತಳಿಗಳನ್ನು ಪ್ರಧಾನಿಮಂತ್ರಿ ಅವರು ಬಿಡುಗಡೆ ಮಾಡಲಿದ್ದಾರೆ. ಈ ಸುಧಾರಿತ ತಳಿಗಳು ಈಗಿನ ಹವಾಮಾನ ಬದಲಾವಣೆಗೆ ಸ್ಪಂಧಿಸುವ ಹಾಗೂ ಪೋಷಕಾಂಶ ಸಮೃದ್ಧ ತಳಿಗಳಾಗಿವೆ.
ನೇತ್ರಾ ಜಂಬೋ-೧ ತಳಿಯನ್ನು ಸಂಸ್ಥೆಯ ಈಗಿನ ನಿರ್ದೇಶಕರಾದ ಡಾ.ದಿನಕರ ಅಡಿಗ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ. ಕೃಷಿಕರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಕೂಲಿ ವೆಚ್ಚವನ್ನು ಈ ತಳಿ ಹೆಚ್ಚಿನ ಪ್ರಮಾಣದಲ್ಲಿ ಉಳಿಸಲಿದೆ. ಈ ತಳಿಯಲ್ಲಿನ ಬೀಜಗಳು ೧೨ಗ್ರಾಂ ತೂಕ ಹಾಗೂ ಇದರಲ್ಲಿ ಬೆಳೆಯುವ ಶೇ.೯೦ ರಷ್ಟು ಬೀಜಗಳು ಒಂದೇ ಗಾತ್ರ ಹೊಂದಲಿವೆ. ನೂರು ಕೆಜಿ ಬೀಜ ಸಂಸ್ಕರಣೆಯಿಂದ ೩೦ ಕೆಜಿ ತಿರುಳು ಸಿಗಲಿದೆ. ಈಗಿರುವ ರಪ್ತು ಗುಣಮಟ್ಟದ ಗ್ರೇಡ್ ಡಬ್ಲ್ಯೂ ೧೮೦ಕ್ಕಿಂತ ಜಾಸ್ತಿ ಗ್ರೇಡ್ (ಡಬ್ಲ್ಯೂ ೧೩೦) ಈ ತಳಿಯ ತಿರುಳಿನದ್ದಾಗಿದೆ. ಈ ತಳಿ ಒಂದು ಟನ್ ಇಳುವರಿಗೆ ಬೀಜ ಹೆಕ್ಕುವಾಗ ೧೬೦೦೦ ಕೂಲಿ ಖರ್ಚನ್ನು ಉಳಿಸುತ್ತದೆ. ಜೊತೆಗೆ ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ ಒಂದು ಟನ್ನಿಗೆ ಸುಮಾರು ರೂ.೧೦೦೦೦ ಜಾಸ್ತಿ ಸಿಗಲಿದೆ. ಒಂದು ಟನ್‌ಗೆ ಒಟ್ಟು ೨೬೦೦೦ ರೂಗಳಷ್ಟು ಹೆಚ್ಚುವರಿ ಲಾಭ ಸಿಗಲಿದೆ. ಇದರ ತಿರುಳಿನ ಸಿಪ್ಪೆ ಸುಲಭದಲ್ಲಿ ಬಿಡಿಸಬಹುದು. ಹಾಗಾಗಿ ಕಾರ್ಖಾನೆಯಲ್ಲೂ ಕೂಲಿ ಖರ್ಚು ಉಳಿಸಲಿದೆ. ಜತೆಗೆ ಈ ಕೂಡಾ ತಿರುಳು ತುಂಬಾ ರುಚಿಕರವಾಗಿರುತ್ತದೆ.
ನೇತ್ರಾ ಗಂಗಾ ತಳಿಯನ್ನು ಹಿಂದಿನ ಪ್ರಭಾರ ನಿರ್ದೇಶಕ ಡಾ. ಗಂಗಾಧರ ನಾಯಕ್ ಮತ್ತವರ ತಂಡ ಅಭಿವೃದ್ಧಿಪಡಿಸಿದೆ. ಇದು ದೊಡ್ಡ ಗಾತ್ರದ ಬೀಜವನ್ನು (೧೨ ರಿಂದ ೧೩ ಗ್ರಾಂ), ಗೊಂಚಲುಗಳಲ್ಲಿ ಬಿಡುವ ತಳಿಯಾಗಿದ್ದು ಉತ್ತಮ ಫಸಲನ್ನು ಕೊಡುತ್ತದೆ. ಪ್ರಾರಂಭದ ಒಂದೆರಡು ವರ್ಷಗಳಲ್ಲೇ ಹೂ ಬಿಡುವ ಹಾಗೂ ದೀರ್ಘಾವಧಿ (ಡಿಸೆಂಬರ್ ನಿಂದ ಏಪ್ರಿಲ್ ತನಕ) ಹೂವು ಮತ್ತು ಗೇರು ಬೀಜ ಬಿಡುವ ತಳಿ. ತಿರುಳಿನ ಪ್ರಮಾಣ ಶೇಕಡಾ ೨೯.೫% ಇರುತ್ತದೆ. ತಳಿಯು ಸವರುವಿಕೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದರಿಂದ ಘನ ಸಾಂದ್ರ ಪದ್ಧತಿಯಲ್ಲಿ ಬೇಸಾಯಕ್ಕೆ ಯೋಗ್ಯ. ಮೂರನೆ ವರ್ಷದಲ್ಲಿಯೇ ಗಿಡವೊಂದಕ್ಕೆ ೫ ಕೆಜಿಗಿಂತ ಮೇಲ್ಪಟ್ಟು ಇಳುವರಿ ಕೊಡುತ್ತದೆ.
ಗೇರಿನಲ್ಲಿ ಸದ್ಯ ಕೃಷಿ ಮಾಡುತ್ತಿರುವ ಭಾಸ್ಕರ, ವಿಆರ್ ಐ-೩, ಉಳ್ಳಾಲ -೩ ತಳಿಗಳು ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದವು. ಹಾಗಾಗಿ ಈ ದೊಡ್ಡ ಗಾತ್ರದ ಬೀಜದ ತಳಿಗಳು ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಹುಟ್ಟಿಸುವ ನೂತನ ತಳಿಗಳಾಗಿವೆ.