ಯಕ್ಷಗಾನದಲ್ಲಿ ಹೊಸತನ ಬೆಂಬಲಿಸಲು ಬಾ. ಸಾಮಗ ಕರೆ
ಉಡುಪಿ: ಕರಾವಳಿಯಲ್ಲಿ ಮೆಚ್ಚುಗೆ ಪಡೆದಿರುವ ಯಕ್ಷಗಾನವೂ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳು ಹೊಸ ಹೊಸದಾಗಿ ಅಭಿವ್ಯಕ್ತಗೊಳ್ಳಬೇಕಾದುದು ಅನಿವಾರ್ಯ ಹಾಗೂ ಅಗತ್ಯವಾದ್ದರಿಂದ ಯಥೋಚಿತವಾದವುಗಳನ್ನು ಪರಿಗ್ರಹಿಸಿ ಅನಗತ್ಯವಾದವುಗಳನ್ನು ಕೈಬಿಟ್ಟು ಕಳೆದು ಯಕ್ಷಗಾನದ ಸಂಘಟನೆಯನ್ನು ಪ್ರೋಜ್ವಲವಾಗಿ ಬೆಳಗಿಸಿ ಬೆಳಸಬೇಕಾದುದು ಕಲಾಭಿಮಾನಿಗಳ ಆದ್ಯ ಕರ್ತವ್ಯವಾಗಿರುವುದರಿಂದ ಯಕ್ಷಗಾನದಲ್ಲಿ ಹೊಸತನ ಬೆಂಬಲಿಸಬೇಕೆಂದು ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರು ಕರೆ ನೀಡಿದರು.
ಸಾಮಗ ಅವರು ಶ್ರೀ ಮಹಿಷಮರ್ದಿನಿ ಯಕ್ಷಗಾನ ಕೂಟ ಉಡುಪಿ ಸಮೀಪದ ಕಡಿಯಾಳಿಯಲ್ಲಿ ಆ. ೯ರಂದು ಏರ್ಪಡಿಸಿದ್ದ ಎರಡನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಯಕ್ಷಗಾನದಲ್ಲಿ ನಿರಂತರವಾದ ಚಲನಶೀಲತೆ, ಜೀವಂತಿಕೆ ಇರಬೇಕಾಗಿದ್ದರೆ ಕ್ಷಣದಿಂದ ಕ್ಷಣಕ್ಕೆ ಅಲ್ಲಿ ಹೊಸತನವಿರಬೇಕು. ಯಕ್ಷಗಾನದಲ್ಲಿ ಇದ್ದ ಸ್ವರೂಪವನ್ನು ವಿರೂಪಗೊಳಿಸುವುದು ಹೊಸತನವಲ್ಲ. ಇದ್ದುದರ ಮೇಲೆ ಒಂದು ಹೊಸ ಪ್ರಭೆಯನ್ನು, ಪ್ರಖರತೆಯನ್ನು, ತೇಜಸ್ಸನ್ನು ಹುಟ್ಟಿಸುವುದು ಹೊಸತನ ಎಂದ ಸಾಮಗರು ಕನ್ನಡಿಗರ ಕನ್ನಡತನವನ್ನು, ಭಾರತೀಯತೆಯನ್ನು ಮಧುರವಾಗಿ ಸಮರಸಗೊಳಿಸಿ ತೋರಿಸುವ ಯಕ್ಷಗಾನಕ್ಕೆ ಹೊಸತನ ಸೃಷ್ಟಿಸುವ ಛಲದಲ್ಲಿ ಏನನ್ನಾದರೂ ಮಾಡಬಾರದೆಂದರು. ಯಕ್ಷಗಾನ ವಿಮರ್ಶಿಸುವರಲ್ಲಿ ಅಪಾರ ಅನುಭವ, ಕಲಾನಿಪುಣತೆ, ಪರಿಜ್ಞಾನ ಅವಶ್ಯ ಎಂದ ಸಾಮಗ ಅವರು ವಿಮರ್ಶೆಯ ಹೆಸರಲ್ಲಿ ಯಕ್ಷಗಾನದ ಹಾದಿ ತಪ್ಪಿಸಬಾರದೆಂದರು.
ಕಲಾವಿದ ಮೌನೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಎ.ಗಣೇಶ್ ಭಟ್ ವರದಿ ವಾಚಿಸಿದರು. ಸಂಘದ ನಿರ್ದೇಶಕ, ಕಲಾವಿದ ಗುರುಪ್ರಸಾದ್ ಸರಳಾಯ ಕಾರ್ಯಕ್ರಮ ನಿರ್ವಹಿಸಿದರು. ಕಿರಣ್ ಹೆಗ್ಡೆ, ಡಾ.ರಮೇಶ್ ಚಿಂಬಾಳ್ಕರ್, ರಘುನಾಥ ನಾಯಕ್, ಅಣ್ಣಯ್ಯ ಪಾಲನ್, ಸತ್ಯನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ಬಾಬು ಕುಡ್ತಡ್ಕ ವಿರಚಿತ ಸತ್ಯನಾರಾಯಣ ಸ್ವಾಮಿ ವೃತ ಕಥಾ ಮಹಾತ್ಮೆ ಪ್ರಸಂಗದ ತಾಳಮದ್ದಳೆ ನಡೆಯಿತು. ಚಿತ್ರದಲ್ಲಿ ಬಾ. ಸಾಮಗ ಭಾಷಣ ಮಾಡುತ್ತಿರುವುದು. ಗಣೇಶ್ ಭಟ್, ಮೌನೇಶ್ ಆಚಾರ್ಯ ಅವರೂ ಚಿತ್ರದಲ್ಲಿದ್ದಾರೆ.