ಬುಡ ಕಟ್ಟು ಆದಿವಾಸಿ ಸಮುದಾಯಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಮನವಿ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಆ.10: ಬುಡಕಟ್ಟು ಆದಿವಾಸಿ ಸಮುದಾಯಕ್ಕೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ಸರ್ಕಾರಗಳು ಗಮನ ಹರಿಸಬೇಕಿದೆ ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಜೆ.ಎಸ್.ನಾಗರಾಜ್ ಮನವಿ ಮಾಡಿದರು.
ವಿಶ್ವ ಬುಡಕಟ್ಟು ಆದಿವಾಸಿ ದಿನದ ಅಂಗವಾಗಿ ತಾಲೂಕಿನ ಮಲಗನಕೆರೆ ಗಿರಿಜನ ಹಾಡಿಯಲ್ಲಿ ರೋಟರಿ ಐಕಾನ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ವಿವಿದೆಡೆ ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮಾಜದ ಜನರಿಗೆ ವಾಸಿಸಲು ಸೂಕ್ತ ಮನೆಗಳು ಇಲ್ಲದಿರುವುದು ಬೇಸರದ ವಿಷಯವಾಗಿದ್ದು ಕಾಡು ಪ್ರಾಣಿಗಳ ಭಯದಿಂದಾಗಿ ಆತಂಕದಲ್ಲಿಯೇ ಜೀವನ ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂದರು.
ಕನಿಷ್ಠ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ ವ್ಯವಸ್ಥೆಗಳು ಇಲ್ಲದೆ ತೊಂದರೆ ಅನುಭವಿಸುತ್ತಿರುವ ಬುಡಕಟ್ಟು ಸಮಾಜಕ್ಕೆ ನ್ಯಾಯಯುತವಾದ ಪರಿಹಾರ ದೊರಕಬೇಕಾದ ಅಗತ್ಯತೆ ಇದೆ ಎಂದರು.
ರೋಟರಿ ಸಂಸ್ಥೆಯ ಖಜಾಂಚಿ ಹಾಗೂ ವಕೀಲ ಬಿ.ಆರ್.ಗಣೇಶ್ ಮಾತನಾಡಿ ಬುಡಕಟ್ಟು ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಅನುದಾನ ನೀಡುತ್ತಿದ್ದರೂ ಸಹ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಬಹುತೇಕ ಹಾಡಿಗಳಲ್ಲಿ ಶಾಶ್ವತ ವಸತಿ ವ್ಯವಸ್ಥೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷತೆಯನ್ನು ತೋರುತ್ತದೆ ಎಂದು ಆರೋಪಿಸಿದರು. ಹಗಲಿನ ವೇಳೆಯಲ್ಲಿಯೇ ಕಾಡು ಪ್ರಾಣಿಗಳು ಇಲ್ಲಿನ ಗುಡಿಸಲುಗಳ ಪಕ್ಕದಲ್ಲಿ ಸುಳಿದಾಡುತ್ತಿವೆ ಎಂದು ಇಲ್ಲಿನ ವಾಸಿಗಳು ಹೇಳುತ್ತಿದ್ದು ಸರ್ಕಾರಗಳು ಇತ್ತ ಗಮನ ಹರಿಸಬೇಕೆಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಬುಡಕಟ್ಟು ಆದಿವಾಸಿ ಸಮುದಾಯದ ಮಕ್ಕಳು, ಮಹಿಳೆಯರು ಮತ್ತು ಯುವಕರಿಗೆ ಸಿಹಿ ತಿನಿಸುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಐಕಾನ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್, ಸದಸ್ಯರಾದ ಕೆ.ರಮೇಶ್, ಸಿ.ಎನ್.ವಿಜಯ್, ರವಿಚಂದ್ರ, ಸತೀಶ್ ಆರಾಧ್ಯ, ಡಿ.ಆರ್.ಧನಂಜಯ, ಡಾ.ಶರತ್ ಮತ್ತಿತರರು ಹಾಜರಿದ್ದರು.