ಆ.14 ರಂದು ಅಹೋರಾತ್ರಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಮಂಡ್ಯ:ಆ.10-ಹಲ್ಲೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಜನತೆಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಆಗಸ್ಟ್ 14ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಎಂದು ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಸಮಿತಿಯ ಮಂಡ್ಯ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಂಡ್ಯ ತಾಲೂಕು ಬಸರಾಳು ಹೋಬಳಿ ಹಲ್ಲೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲ್ಲೇಗೆರೆ ಮೋಳೆ ಗ್ರಾಮ ಠಾಣ ಜಾಗ ಆರು ಎಕರೆ ಮತ್ತು ಹಲ್ಲೆಗೆರೆ ಸರ್ವೇ ನಂಬರ್ 153ರ ಹಿರೇಮಡಿ ಒಂದು ಎಕರೆ ಜಮೀನಿದೆ.ಈ ಜಮೀನಿನಲ್ಲಿ ಹಲ್ಲೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ನಿವೇಶನ ರಹಿತ ಮತ್ತು ಬಡಜನರಿಗೆ ನಿವೇಶನ ನೀಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ ಎಂದರು.
ಈ ಜಾಗವನ್ನು ಮೂರು ಬಾರಿ ಸರ್ವೇ ಮಾಡಲಾಗಿದೆ.ಆದರೆ ಕೆಲ ಅಧಿಕಾರಿಗಳು ಹಲವರ ಆಮಿಷಕ್ಕೆ ಬಲಿಯಾಗಿ ಬಡವರಿಗೆ ನಿವೇಶನ ನೀಡಲು ಅಡ್ಡಿ ಮಾಡುತ್ತಿದ್ದಾರೆ ಎಂದು ದೂರಿದರು.
ತಕ್ಷಣವೇ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಬಡವರಿಗೆ ನಿವೇಶನ ನೀಡಬೇಕು.ಹಾಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅಹೋರಾತ್ರಿ ಪ್ರತಿಭಟನೆ ಮತ್ತು ಕಪ್ಪು ಬಾವುಟ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ತಾಲೂಕು ಸಂಚಾಲಕ ಮಾಚಹಳ್ಳಿ ಕೃಷ್ಣಪ್ಪ ,ಚಿಕ್ಕಬಳ್ಳಿ ಶಂಕರ್ ಉಪಸ್ಥಿತರಿದ್ದರು.