ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶ : ಕೆ. ಅಭಿಲಾಷ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.10- ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುವುದೇ ನಮ್ಮ ಉದ್ದೇಶ ಎಂದು ಇಂಡಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಕೆ. ಅಭಿಲಾಷ್ ತಿಳಿಸಿದರು.
ಅವರು ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆ ವತಿಯಿಂದ ಇಂಡಿಯನ್ ಬ್ಯಾಂಕ್ ಸ್ಥಾಪನೆಗೊಂಡು 118 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ನಡೆಸಿದ ಗ್ರಾಹಕರ ಜಾಗೃತಿ ಜಾಥಾದಲ್ಲಿ ಮಾತನಾಡಿ, ಇಂಡಿಯನ್ ಬ್ಯಾಂಕ್ ಸ್ಥಾಪನೆಯಾಗಿ 118 ವಸಂತಗಳನ್ನು ಪೂರೈಸುವ ಮೂಲಕ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದೆ. ಆದೇ ರೀತಿ ಚಾಮರಾಜನಗರ ಶಾಖೆಯು ಆರಂಭಗೊಂಡು 50 ವರ್ಷಗಳನ್ನು ಪೂರ್ಣಗೊಂಡಿದ್ದು, ಸಾರ್ವಜನಿಕರು ನಮ್ಮ ಬ್ಯಾಂಕ್‍ನಲ್ಲಿ ಖಾತೆ ತೆರೆದು ಗುಣಮಟ್ಟದ ಸೇವೆಯನ್ನು ಪಡೆದುಕೊಳ್ಳಿ. ಕೃಷಿ ಸಾಲ, ಮನೆ ಸಾಲ, ಚಿನ್ನದ ಮೇಲೆ ಕಡಿಮೆ ಬಡ್ಡಿ ಸಾಲ, ವಾಹನ ಸಾಲ, ಶಿಕ್ಷಣ ಸಾಲ ಸೇರಿದಂತೆ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ನಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ಜಾಗೃತಿ ಜಾಥಾವು ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಬ್ಯಾಂಕ್ ತಲುಪಿತು. ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಣೆ ಮಾಡಿ, ಇಂಡಿಯನ್ ಬ್ಯಾಂಕ್ ಸೇವೆಯ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳು ಅರಿವು ಮೂಡಿಸಿದರು.
ಜಾಥಾದಲ್ಲಿ ನಾಗವಳ್ಳಿ ಶಾಖೆ ವ್ಯವಸ್ಥಾಪಕ ಎಂ. ಅರುಣ್‍ಕುಮಾರ್, ಚಾ.ನಗರ ಶಾಖೆಯ ಸಹಾಯಕ ವ್ಯವಸ್ಥಾಪಕ ಸಂಜಯ್‍ಕುಮಾರ್ ಕಾಸಿಯಪ್, ಗ್ರಾಮೀಣ ಕ್ಷೇತ್ರಾಧಿಕಾರಿ ಎಚ್. ಜ್ಯೋತಿ, ಕ್ಯಾಷಿಯರ್ ಎ.ಆರ್. ಶ್ರೀದೇವಿ ಅರಸು, ಅದಿತ್ಯ ಬಿರ್ಲಾ ಸನ್‍ಲೈಪ್ ಇನ್ಸ್‍ರೇಷನ್ ಕಂಪನಿಯ ಎಚ್. ಇಂದುಮತಿ, ಶಿವಶಂಕರಕುಮಾರ್, ಸಿಬ್ಬಂದಿಗಳಾದ ಶಿವಕುಮಾರ್ ಆರ್. ನಟರಾಜು, ಎಸ್. ನಟರಾಜು, ಎನ್. ಕುಮಾರ್ ಉತ್ತುವಳ್ಳಿ, ಬಿ. ಕಮಲ ಮೊದಲಾದವರು ಇದ್ದರು.