ಬಿಜೆಪಿ-ಜೆಡಿಎಸ್‍ನದ್ದು ಪಾಪ ವಿಮೋಚನಾ ಯಾತ್ರೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.10:- ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವುದು ಪಾಪ ವಿಮೋಚನಾ ಯಾತ್ರೆ. ಆದರೆ, ನಮ್ಮದು ಅಧರ್ಮಿಗಳ ವಿರುದ್ಧ ಧರ್ಮಯುದ್ಧ, ಅನ್ಯಾಯದ ವಿರುದ್ಧ ನ್ಯಾಯಯುದ್ಧ. ಅಸತ್ಯದ ವಿರುದ್ಧ ಸತ್ಯದ ಹೋರಾಟ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಆ.9 ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ನಡೆಸಿದ ದಿನ. 15 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಗಣಿ ಲೂಟಿ ಮಾಡಿದವರ ವಿರುದ್ಧ ಹೋರಾಟ ಮಾಡಲಾಗಿತ್ತು. ಇಂದು ದೇಶ, ಸಂವಿಧಾನ ಉಳಿಸಲು, ಬಡವರ ಕಲ್ಯಾಣಕ್ಕೆ ಈ ಚಳವಳಿ ಮಾಡಲಾಗುತ್ತಿದೆ. ಈ ಸರ್ಕಾರವನ್ನು 10 ತಿಂಗಳಲ್ಲಿ ತೆಗೆದು ಹಾಕುತ್ತೇವೆ ಎಂದು ಹೊರಟಿರುವವರ ವಿರುದ್ಧ ಬಡವರಿಗಾಗಿ ನಾವು ಹೋರಾಡುತ್ತಿದ್ದೇವೆ ಎಂದರು.
ಮಿಸ್ಟರ್ ಕುಮಾರಸ್ವಾಮಿ, ಅಶೋಕ ಹಾಗೂ ವಿಜಯೇಂದ್ರ ಅವರೇ ಈ ಡಿಕೆಶಿ ನೇತೃತ್ವದಲ್ಲಿ 136 ಸೀಟುಗಳನ್ನು ಪಡೆದಿದ್ದೇವೆ. ಈ ಸರ್ಕಾರ ತೆಗೆಯಲು ಏನೇ ಕುತಂತ್ರ ಮಾಡಿದರೂ ಆಗುವುದಿಲ್ಲ. ಕುಮಾರಸ್ವಾಮಿ ಹಲವು ಸರ್ಕಾರ ಬೀಳಿಸಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ತೆಗೆಯಲು ಆಗಲ್ಲ. ನಿಮಗೆ ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕಾ? ಈ ಬಂಡೆ ಸಿದ್ದರಾಮಯ್ಯ ಅವರ ಜತೆ ಇದೆ. ಜತೆಗೆ 136 ಶಾಸಕರು ಇದ್ದಾರೆ. ನಿಮಗೆ ಏನೂ ಮಾಡಲು ಆಗಲ್ಲ. ಪಾದಯಾತ್ರೆ ಮಾಡಿ ನಮಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಿದ್ದೀರಿ ಎಂದರು.
ಮುಡಾ ಹಗರಣ ಮುಂದಿಟ್ಟುಕೊಂಡು ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಮುಡಾದವರು ಅವರ ಜಮೀನು ಒತ್ತುವರಿ ಮಾಡಿಕೊಂಡು ಅದಕ್ಕೆ ಬದಲಿಯಾಗಿ 14 ನಿವೇಶನ ಕೊಟ್ಟಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನು. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರಾ? ನಿವೇಶನ ಕೊಟ್ಟಿದ್ದು ಯಾರ ಕಾಲದಲ್ಲಿ. ಯಡಿಯೂರಪ್ಪ ಅವರ ಕಾಲದಲ್ಲಿ 25 ಹಗರಣಗಳು ಆಗಿವೆ. ಕುಮಾರಸ್ವಾಮಿ ಕ್ಲೀನ್ ಸ್ವಾಮಿಯಂತೆ. ನಿಮ್ಮೆಲ್ಲಾ ಹಗರಣವನ್ನು ಹೊರಗೆ ತರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಪಕ್ಷದಿಂದ ಓಡಿಸಿದರು: ಯಾರು ರಾಜೀನಾಮೆ ಕೊಡುತ್ತಾರೆ ಎಂದು ಕಾಲವೇ ತೀರ್ಮಾನ ಮಾಡುತ್ತದೆ. ಯಡಿಯೂರಪ್ಪ ಅವರಿಗೆ ಮೋಸ ಮಾಡಿದ್ದು ಯಾರು? ದೇವೇಗೌಡರು ಅವರ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಪಕ್ಷದಿಂದ ಎಲ್ಲರನ್ನೂ ಓಡಿಸಿದರು. ಅವರು ಯಾರನ್ನೂ ಸಹಿಸುವುದಿಲ್ಲ. ಯಾರು ಬೆಳೆಯುತ್ತಾರೋ ಅವರನ್ನು ತುಳಿಯುವ ಕೆಲಸ ಮಾಡುತ್ತಾರೆ. ಹೀಗಾಗಿಯೇ ಜೆಡಿಎಸ್ 19 ಸ್ಥಾನಕ್ಕೆ ಬಂದಿದೆ ಎಂದು ವ್ಯಂಗ್ಯವಾಡಿದರು.
ವಿಡಿಯೋ ಪ್ರದರ್ಶನ: ಡಿ.ಕೆ.ಶಿವಕುಮಾರ್ ತಮ್ಮ ಭಾಷಣದ ಮಧ್ಯೆ ಮೈಸೂರು ಚಲೋ ಪಾದಯಾತ್ರೆಗೆ ಅಪಸ್ವರ ವ್ಯಕ್ತಪಡಿಸಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದ್ದ ವಿಡಿಯೋ, ದೇವೇಗೌಡರು ಬಿಜೆಪಿಯ ವಿರುದ್ಧ ಹಾಗೂ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಟೀಕಿಸಿದ್ದ ವಿಡಿಯೊಗಳನ್ನು ಪ್ರದರ್ಶಿಸಿದರು. ಅಲ್ಲದೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಡಿದ್ದ ಆರೋಪಗಳ ವಿಡಿಯೊ ಪ್ರದರ್ಶಿಸಿದರು.