ಸಿಎಂ ರಾಜೀನಾಮೆ ನೀಡುವವರೆಗೆ ಹೋರಾಟ
ಸಂಜೆವಾಣಿ ನ್ಯೂಸ್
ಮೈಸೂರು: ಆ.10:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟ ಮುಂದುವರಿಸಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ತಪ್ಪು ಮಾಡಿಲ್ಲ ಎನ್ನುವ ಕಾಂಗ್ರೆಸ್ ಸಮಾವೇಶ ಇಂದಿಗೆ ಮುಗಿದಿದೆ. ಆದರೆ ಬಿಜೆಪಿ ಮಾತ್ರ ಹೋರಾಟ ನಿಲ್ಲಿಸುವುದಿಲ್ಲ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರಿಯಲಿದ್ದು, ರಾಜೀನಾಮೆ ನೀಡುವವರೆಗೂ ನಾವು ಕೂಡ ಜಗ್ಗಲ್ಲ-ಬಗ್ಗಲ್ಲ. ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಹೊಸತೇನು ಇರಲಿಲ್ಲ. ಹಾಡಿದ್ದು ಹಾಡು ಕಿಸ್ಬಾಯಿ ದಾಸ ಎಂಬಂತೆ ಹಳೆಯ ಮಾತುಗಳನ್ನೇ ಆಡಿದರು. ಕಾಸು ಕೊಟ್ಟು ಕರೆದುಕೊಂಡು ಬಂದ ಜನರ ಎದುರು ನಾನು ತಪ್ಪು ಮಾಡುತ್ತೀನಾ ಎಂದು ಕೇಳಿದರೇ ಇಲ್ಲ ಎನ್ನದೇ ಇನ್ನೇನು ಹೇಳುತ್ತಾರೆ ಎಂದು ಟೀಕಿಸಿದರು.
ಯಾರೇ ಆದರೂ ಶಿಕ್ಷೆಯಾಗಲಿ:
ನನ್ನ 40 ವರ್ಷದ ರಾಜಕೀಯ ಜೀವನ ಕ್ಲೀನ್ (ಶುದ್ದ), ಕ್ಲೀನ್, ಕ್ಲೀನ್ ಅಂತಿದ್ದಾರೆ. ನಿನ್ಯಾಕೇ ಕ್ಲೀನ್ ಅಂತ ಹೇಳಿಕೊಳ್ಳುತ್ತಿದ್ದೀರಾ? ಜನ ನಿಮ್ಮನ್ನು ಕ್ಲೀನ್ ಎಂದು ಹೇಳಬೇಕು. ಅಷ್ಟೊಂದು ಕ್ಲೀನ್ ಆಗಿರುವ ನೀವು ಮುಡಾ ಹಗರಣವನ್ನು ಸಿಬಿಐಗೆ ವಹಿಸಲು ಏಕೇ ಹೆದರುತ್ತಿದ್ದೀರಾ?. ನಾವು ಪಾದಯಾತ್ರೆ ಬರುವ ದಾರಿಯಲ್ಲಿ ಬಾಯಿ ಬಡಿದುಕೊಂಡು ಏಕೆ ಬರುತ್ತಿದ್ದೀರಾ?, ಮುಡಾ 50:50 ಅನುಪಾತದ ಯೋಜನೆ ಬಿಜೆಪಿ ಅವಧಿಯಲ್ಲಿ ಜಾರಿಗೆ ಬಂದರು ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಆದೇಶ ಮಾಡಿಲ್ಲ. ಹೀಗಾಗಿ ನಿವೇಶನ ಮಂಜೂರು ಮಾಡಿದವರು ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದವರೇ ಆಗಿದ್ದರು ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಆಪತ್ತು ತರಲಿದೆ:
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ ಹಗರಣ ನಡೆದಿತ್ತು. ಆದರೆ, ಹಗರಣದಲ್ಲಿ ನಮ್ಮ ಮಂತ್ರಿದು ತಪ್ಪು ಮಾಡಿಲ್ಲ ಎಂದು ಸಮರ್ಥಿಸುತ್ತಿದ್ದರು. ಸಿಬಿಐ-ಇಡಿ ಯಾವಾಗ ಹಗರಣದಲ್ಲಿ ತನಿಖೆÉ ಕೈಗೆತ್ತಿಕೊಂಡಾಗ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಒಪ್ಪಿಕೊಂಡರು. ಈಗಾಗಲೇ ವಾಲ್ಮೀಕಿ ಹಗರಣದ ತನಿಖೆ ಒಂದು ಹಂತಕ್ಕೆ ಬಂದಿದ್ದು, ಬ್ಯಾಂಕ್ ಅಧಿಕಾರಿಗಳು ಸಿಬಿಐಗೆ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಅದರಂತೆ ಈಗ ಸಿಬಿಐ ತನಿಖೆ ನಡೆಸುತ್ತಿದೆ. ಇದು ಸರ್ಕಾರಕ್ಕೆ ಆಪತ್ತು ತರಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ರಾಜ್ಯ ಎಸ್‍ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣ, ಮಾಜಿ ಸಚಿವ ಅರವಿಂದ ಬೆಲ್ಲದ್, ಶಾಸಕ ಟಿ.ಎಸ್.ಶ್ರೀವತ್ಸ, ರಾಜ್ಯ ಎಸ್‍ಟಿ ಮೋರ್ಚಾದ ಬಂಗಾರು ಹನುಮಂತ, ಮಾಜಿ ಮೇಯರ್ ಶಿವಕುಮಾರ್ ಇದ್ದರು.