ಪ್ರವಾಸಿಗರಿಗೆ ವರ್ಧಿತ ಸೇವೆ: ಸಚಿವ ಈಶ್ವರ ಖಂಡ್ರೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.10:- ಮೈಸೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ವರ್ಧಿತ ಸೇವೆಗಳನ್ನು ನೀಡಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿರುವ ಲಗೇಜು ಕೊಠಡಿ ಮತ್ತು ಹುಲಿ ಮನೆಯ ವೀಕ್ಷಣಾ ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮೃಗಾಲಯ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮೃಗಾಲಯಗಳಲ್ಲಿ ಒಂದಾಗಿದೆ. ಪ್ರತಿ 4 ವರ್ಷಕ್ಕೊಮ್ಮೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನಡೆಸುವ ಸಾಮರ್ಥ್ಯ ನಿರ್ವಹಣಾ ಮೌಲ್ಯೀಕರಣದ ಪ್ರಕಾರ ಭಾರತದ ಮೃಗಾಲಯಗಳ ಶ್ರೇಣೀಕರಣದಲ್ಲಿ ಶ್ರೀ ಚಾಮರಾಜೇಂದ್ರ ಮೃಗಾಲಯ 2ನೇ ಸ್ಥಾನದಲ್ಲಿದ್ದು, ಚೆನ್ನೈ ಅರಿಜ್ಞರ್ ಅಣ್ಣ ಮೃಗಾಲಯ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.
ಮೃಗಾಲಯಕ್ಕೆ ಬರುವ ಪ್ರವಾಸಿಗರು ತಮ್ಮ ಲಗೇಜು ಹೊತ್ತು ಮೃಗಾಲಯ ವೀಕ್ಷಣೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಪ್ರವಾಸಿಗರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಪ್ರವಾಸಿಗರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಲಗ್ಗೇಜು ಕೊಠಡಿ ಮಾಡಲಾಗಿದೆ. ಈ ನಡುವೆ ಮೃಗಾಲಯದಲ್ಲಿರುವ ಹುಲಿ ಮನೆಗಳಲ್ಲಿ ಪ್ರವಾಸಿಗರು ಹುಲಿಗಳನ್ನು ವೀಕ್ಷಿಸಲು ಇನ್ನಷ್ಟು ಸುಲಭವಾಗುವಂತೆ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗಿದೆ. ಇದಕ್ಕಾಗಿ ಎತ್ತರದ ದಿಬ್ಬ ನಿರ್ಮಿಸಿದ್ದು, ಗಾಜಿನೊಳಗಿನಿಂದ ಹುಲಿಗಳ ವೀಕ್ಷಣೆ ಮಾಡಬಹುದು ಎಂದರು.
ವನ್ಯಮೃಗ ರಕ್ಷಣಾ ಕೇಂದ್ರ: ಮೈಸೂರು ಹೊರವಲಯದ ಕೂರ್ಗಳ್ಳಿಯಲ್ಲಿ ನಾಲ್ಕು ವನ್ಯಜೀವಿ ರಕ್ಷಣಾ ವಿಭಾಗಗಳಿದ್ದು, ಇತ್ತೀಚೆಗೆ ಮತ್ತೆ 2 ವಿಭಾಗಕ್ಕೆ ಅನುಮೋದನೆ ನೀಡಲಾಗಿದೆ. ಇಲ್ಲಿ ಗಾಯಗೊಂಡ ಅಥವಾ ಗ್ರಾಮಕ್ಕೆ ನುಗ್ಗಿ ಮಾನವ? ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿ ಸೆರೆ ಹಿಡಿದ 8 ಹುಲಿ ಅಥವಾ ಚಿರತೆಗಳನ್ನು ಇಲ್ಲಿ ಸಂರಕ್ಷಿಸಬಹುದಾಗಿದೆ. ಇದರ ಜತೆಗೆ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳ ಪೆÇೀಷಣೆ ಮಾಡಲು ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು, 2 ಆನೆ ಮರಿ ಮತ್ತು 3 ದೊಡ್ಡ ಆನೆಗಳಿದ್ದು, ಇವುಗಳಿಗಾಗಿಯೇ ವಿಶೇಷವಾಗಿ ಈಜುಕೊಳ ವಿನ್ಯಾಸಗೊಳಿಸಲಾಗಿದೆ ಎಂದರು.