ನಿರುದ್ಯೋಗಿ ಯುವಕರು ಸ್ವಾವಲಂಬಿಗಳಾಗಲು ಕರೆ
ಹುಳಿಯಾರು, ಆ. ೧೦- ನಿರುದ್ಯೋಗಿ ವಿದ್ಯಾವಂತ ಯುವಕರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ, ಸ್ಟ್ಯಾಂಡ್ ಆಫ್ ಇಂಡಿಯಾ ಮುಂತಾದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಯಳನಡು ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ರಕ್ಷಿತ್‌ಕುಮಾರ್ ಹೇಳಿದರು.
ಹೋಬಳಿಯ ಯಳನಾಡು ಗ್ರಾಮದಲ್ಲಿ ಯಳನಡು ಗ್ರಾಮ ಪಂಚಾಯ್ತಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ.ಕುಮಾರಸ್ವಾಮಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಜೀವನ ಜ್ಯೋತಿ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮುಂತಾದವುಗಳನ್ನು ಬ್ಯಾಂಕುಗಳ ಮುಖಾಂತರ ನೊಂದಣಿ ಮಾಡಿಸಿಕೊಂಡು ಮುಂದೆ ಆಗಬಹುದಾದ ಅನಾಹುತಗಳಿಗೆ ವಿಮಾ ಹಣ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಯಳನಾಡು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ.ಹರ್ಷ, ಯಳನಡು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಶಿಧರ್, ಪಂಚಾಯ್ತಿ ಸದಸ್ಯರಾದ ರಮೇಶ್, ಎಂಬಿಕೆ ಪರಿಮಳ, ಉದ್ಯಮಿ ಶೈಲಾಶ್ರೀ ಮತ್ತಿತರರು ಉಪಸ್ಥಿತರಿದ್ದರು.