ರೈತರಿಗೆ ಮಾದರಿಯಾದ ರೈತ ಗೋಪಾಲಪ್ಪ
ಮಾಲೂರು.ಆ.೧೦- ತಾಲ್ಲೂಕಿನಲ್ಲಿ ಯಾವುದೇ ನದಿ ನಾಲೆಗಳು ಇಲ್ಲದಿದ್ದರು, ಛಲದಿಂದ ಲಭ್ಯವಿರುವ ಕೊಳವೆ ಬಾವಿಗಳ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಸುಮಾರು ೫೦ ಎಕರೆಗೂ ಹೆಚ್ಚು ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವುದರ ಮೂಲಕ ಚಿಕ್ಕ ಕಲ್ಲಹಳ್ಳಿಯ ರೈತ ಗೋಪಾಲಪ್ಪ ೭೧ ವರ್ಷವಾದರೂ ತಾನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಮಾಸ್ತಿ ಹೋಬಳಿಯ ಚಿಕ್ಕ ಕಲ್ಲಹಳ್ಳಿ ಗ್ರಾಮದ ರೈತ ಗೋಪಾಲಪ್ಪ ಎಂಬುವರು ತಮಗಿರುವ ೫೦ ಎಕರೆ ಜಮೀನಿನಲ್ಲಿ ೪೦ ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ೬೮ ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಅದರಲ್ಲಿ ೫ ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಲಭ್ಯವಿದ್ದು, ಲಭ್ಯವಿರುವ ನೀರನ್ನು ೨ ಕಿಲೋಮೀಟರ್ ದೂರದಿಂದ ಪೈಪ್ ಲೈನ್ ಮೂಲಕ ಕೃಷಿ ಹೊಂಡದಲ್ಲಿ ನೀರನ್ನು ಸಂಗ್ರಹಿಸಿ ತೋಟಕ್ಕೆ ತಿಪ್ಪೇಗೊಬ್ಬರ, ಹೊಂಗೆ ಇಂಡಿ, ಬೇವಿನ ಹಿಂಡಿ, ಜಮೀನಿಗೆ ಹಾಕಿ ಫಲವತ್ತತೆ ಹೆಚ್ಚಿಸಿಕೊಂಡು, ಸಾವಯವ ಕೃಷಿ ಬಳಸಿಕೊಂಡು ಹನಿ ನೀರಾವರಿ ಪದ್ಧತಿ ಮೂಲಕ ಶುಂಠಿ ೯ ಎಕರೆ, ಬಾಳೆ ೭ ಎಕರೆ, ಕೊತ್ತಂಬರಿ ೧ ಎಕರೆ, ಗಡ್ಡೆಕೋಸು ೬ ಎಕರೆ, ಬೆಳೆದಿದ್ದು ಶುಂಠಿ, ಬಾಳೆ, ಆಲೂಗಡ್ಡೆ, ಗಡ್ಡೆಕೋಸು, ಉತ್ತಮ ಇಳುವರಿ ತಂದುಕೊಟ್ಟಿದೆ.
ಗಡ್ಡೆಕೋಸು ಇನ್ನಿತರೆ ಬೆಳೆಗಳನ್ನು ಹಾಕಿ ಬೆಳೆಗಳು ಸರಿಯಾಗಿ ಆಗದೆ ನಷ್ಟ ಅನುಭವಿಸಿ ನಂತರದ ದಿನಗಳಲ್ಲಿ ತಮ್ಮ ೬ ಎಕರೆ ಜಮೀನಿಗೆ ಹಾಸನದಿಂದ ಶುಂಠಿ ಬಿತ್ತನೆ ತಂದು ಶುಂಠಿಯನ್ನು ನಾಟಿ ಮಾಡಿದ್ದಾರೆ ೨ ವರ್ಷಗಳ ಕಾಲ ಶುಂಠಿ ಬೆಳೆ ಇಳುವರಿ ನೀಡದೆ ೪೦ ಲಕ್ಷ ನಷ್ಟ ಅನುಭವಿಸಿದ್ದಾರೆ. ನಂತರದ ದಿನಗಳಲ್ಲಿಯೂ ಸಹ ಗೋಪಾಲಪ್ಪ ಅವರು ಛಲವನ್ನು ಬಿಡದೆ ಶುಂಠಿ ಬೆಳೆಯನ್ನೇ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಬೇಕೆಂದುಕೊಂಡು ಮತ್ತೊಮ್ಮೆ ೪ ಎಕರೆಗೆ ಶುಂಠಿಯನ್ನು ಹಾಕಿ ೧.೩೦ ಕೋಟಿ ಮಾರಾಟ ಮಾಡಿ ಲಾಭ ಪಡೆದಿದ್ದರು.
ಪ್ರತಿನಿತ್ಯ ತೋಟಗಳಲ್ಲಿ ೩೦ ರಿಂದ ೪೦ ಮಂದಿ ಕೂಲಿ ಕಾರ್ಮಿಕರು ಮಾಲೂರು ಹಾಗೂ ಬಂಗಾರಪೇಟೆ ಭಾಗಗಳಿಂದ ಬಂದು ಕೆಲಸ ಮಾಡುತ್ತಾರೆ, ಪ್ರಸ್ತುತ ೯ ಎಕರೆ ಜಮೀನಿಗೆ ಶುಂಠಿಯನ್ನು ಹಾಕಿದ್ದು ಇದೊಂದು ವರ್ಷದ ಬೆಳೆಯಾಗಿದ್ದು ಇನ್ನೇನು ೨ ತಿಂಗಳು ಒಳಗೆ ಕಟಾವಿಗೆ ಬರಲಿದೆ.
ರೈತರು ಯಾವುದೇ ಬೆಳೆ ಹಾಕಿದ ಮೇಲೆ ತಾಳ್ಮೆ ಹಾಗೂ ನಂಬಿಕೆ ಇರಬೇಕು ಬೆಳೆಯನ್ನು ಉತ್ತಮ ರೀತಿಯಲ್ಲಿ ಬೆಳೆಯಾದರೆ ಭೂ ತಾಯಿ ಕೈಬಿಡುವುದಿಲ್ಲ, ಒಂದು ಬೆಳೆ ನಷ್ಟವಾದರು, ಮತ್ತೊಂದು ಬೆಳೆ ನಮ್ಮ ಕೈ ಹಿಡಿಯುತ್ತದೆ ಈ ನಿಟ್ಟಿನಲ್ಲಿ ಕಳೆದ ೪೦ ವರ್ಷಗಳಿಂದ ವ್ಯವಸಾಯವನ್ನು ಮಾಡುತ್ತ ಹೊಸ ಬೆಳೆಗಳನ್ನು ಬೆಳೆಯುತಿದ್ದಾರೆ.
ಪೋಷಣೆ ಮಾಡುವ ಬಗ್ಗೆ ಮಾಹಿತಿ
ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು ಹಾಗೂ ಸಹಕಾರ ಪಡೆಯದೆ. ತಾವೇ ಸ್ವಂತಿಕೆಯಿಂದ ಶುಂಠಿಯ ಬಿತ್ತನೆ ಮಾಡಿಕೊಂಡು ೧,೫೦೦ ಮೂಟೆ ಶುಂಠಿ ಬಿತ್ತನೆ ಮಾರಾಟ ಮಾಡಿದ್ದಾರೆ, ಮಾಸ್ತಿ ಹೋಬಳಿಯಲ್ಲಿ ಇವರ ಬಿತ್ತನೇ ನೋಡಿ, ಮಾರ್ಗದರ್ಶನದಲ್ಲಿ ೪೦-೫೦ ಮಂದಿ ರೈತರು ಶುಂಠಿ ಬೆಳೆ ಬೆಳೆದಿದ್ದು, ಇತರೆ ರೈತರು ಶುಂಠಿ ಬೆಳೆ ಹಾಕಿದಾಗ ಅವರ ತೋಟಕ್ಕೆ ಭೇಟಿ ನೀಡಿ ಅವರಿಗೆ ಬೆಳೆ ಪೋಷಣೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.