ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾರತ ಸೇವಾದಳ ತರಬೇತಿ ಅಗತ್ಯ
ಕೋಲಾರ,ಆ,೧೦- ಹದಿಹರೆಯದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಶಿಸ್ತು ಮೂಡಿಸಲು ಭಾರತ ಸೇವಾದಳ ಸಹಕಾರಿಯಾಗಲಿದೆ ಎಂದು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರಪ್ಪ ಹೇಳಿದರು.
ಕಾಲೇಜಿನಲ್ಲಿ ಶುಕ್ರವಾರ ಭಾರತ ಸೇವಾದಳ ಜಿಲ್ಲಾ ಸಮಿತಿವತಿಯಿಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಆಯೋಜಿಸಲಾಗಿದ್ದ ರಾಷ್ಟ್ರಧ್ವಜಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಭಾರತ ಸ್ವಾತಂತ್ರ್ಯ ಸಂಗ್ರಾಮವು ಶಿಸ್ತು ಬದ್ಧವಾಗಿ ಸಮರಶೀಲವಾಗಿ ಸಂಘಟಿಸಲು ಭಾರತ ಸೇವಾದಳ ಕಾರಣವಾಗಿದ್ದು, ಸ್ವಾತಂತ್ರ್ಯ ನಂತರವೂ ಮಕ್ಕಳು ದೇಶಪ್ರೇಮ ಮೈಗೂಡಿಸಿಕೊಳ್ಳಲು ಸೇವಾದಳ ಸಹಕಾರಿಯಾಗಿದೆ ಎಂದರು.
ಪದವಿ ಪೂರ್ವ ಕಾಲೇಜು ಹಂತದಲ್ಲಿಯೂ ಪ್ರತಿ ಕಾಲೇಜಿನಲ್ಲಿ ಭಾರತ ಸೇವಾದಳ ಘಟಕವನ್ನು ಆರಂಭಿಸಬೇಕು ಎಂದು ಸರಕಾರವೇ ಸುತ್ತೋಲೆ ಹೊರಡಿಸಿದೆ, ತಮ್ಮ ಕಾಲೇಜಿನಲ್ಲಿಯೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸೇವಾದಳ ಘಟಕ ಆರಂಭಿಸಲಾಗುವುದು ಎಂದು ಹೇಳಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ರಾಷ್ಟ್ರಧ್ವಜ ಕುರಿತು ಉಪನ್ಯಾಸ ನೀಡಿ, ರಾಷ್ಟ್ರಧ್ವಜ ಪ್ರತಿಯೊಬ್ಬ ಭಾರತೀಯರ ದೇಶ ಪ್ರೇಮದ, ಭಾವನಾತ್ಮಕ ಭಾವೈಕ್ಯತೆಯ ಸಂಕೇತವಾಗಿದ್ದು, ರಾಷ್ಟ್ರಧ್ವಜಕ್ಕೆ ಹೇಗೆ ಗೌರವ ಸಲ್ಲಿಸಬೇಕು ಎಂಬ ಕುರಿತು ಪ್ರತಿಯೊಬ್ಬರೂ ಅರಿತುಕೊಂಡು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದರು.
ಶಿಬಿರ ಆರಂಭ ಮುನ್ನ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಬಾಲಕೃಷ್ಣಪ್ಪ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಮುಂದಿನ ದಿನಗಳಲ್ಲಿ ಸೇವಾದಳ ಪುನಶ್ಚೇತನ ಕಾರ್ಯಾಗಾರ ಆಯೋಜಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಆರೋಹಣ, ಅವರೋಹಣ ಕುರಿತು ಪ್ರಾತ್ಯಕ್ಷಿಕೆ ತರಬೇತಿ ನೀಡಿದರು.