ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೆಜಿಎಫ್. ಆ. ೧೦-೦ಕೆಜಿಎಫ್ ಜಿಲ್ಲಾ ಪೊಲೀಸ್ ಹಾಗೂ ಬೆಂಗಳೂರು ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಪೊಲೀಸರಿಗೆ ಮತ್ತು ಪೊಲೀಸ್ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶುಕ್ರವಾರದಂದು ಏರ್ಪಡಿಸಲಾಗಿತ್ತು.
ಕೆಜಿಎಫ್‌ನ ಚಾಂಪಿಯನ್ ರೀಫ್ಸ್‌ನಲ್ಲಿನ ಡಿಎಆರ್ ಆವರಣದಲ್ಲಿ ಏರ್ಪಡಿಸಿದ್ದ ಶಿಬಿರವನ್ನು ನಿಸ್ತಂತು ಪೊಲೀಸ್ ಇನ್ಸ್‌ಪೆಕ್ಟರ್ ನವೀನ್‌ಕುಮಾರ್ ಅವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ಆರೋಗ್ಯ ತಪಾಸಣಾ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ೨೪ ಗಂಟೆಗಳ ಕಾಲ ನಿರಂತರವಾಗಿ ದುಡಿಯುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಆರೋಗ್ಯವಂತರಾಗಿರಬೇಕೆನ್ನುವ ದಿಸೆಯಲ್ಲಿ ಬೆಂಗಳೂರು ಫೋರ್ಟಿಸ್ ಆಸ್ಪತ್ರೆ ವತಿಯಿಂದ ಕೆಜಿಎಫ್‌ನಲ್ಲಿ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಪೊಲೀಸರ ಬಗ್ಗೆ ಕಾಳಜಿ ವಹಿಸಿದ ಫೋರ್ಟಿಸ್ ಆಸ್ಪತ್ರೆಯವರನ್ನು ಅಭಿನಂದಿಸಿದರು. ಪೊಲೀಸರು ಕರ್ತವ್ಯನಿರತರಾಗಿದ್ದಾಗ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯವೇ ಮಹಾಭಾಗ್ಯ ಆಗಿರುವುದರಿಂದ ಉತ್ತಮ ಆರೋಗ್ಯವ ಕಡೆ ಒತ್ತು ನೀಡಿ, ಕರ್ತವ್ಯ ನಿರ್ವಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ, ಪಿಎಸ್‌ಐ ಮತ್ತು ಆರ್‌ಎಸ್‌ಐಗಳು ಹಾಜರಿದ್ದರು. ಶಿಬಿರದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕುಟುಂಬವರ್ಗದವರು ಭಾಗವಹಿಸಿದ್ದರು.
ಆರ್.ಎಸ್.ಐ ಶಂಕರ್.ಎಸ್ ಅವರಿಂದ ಸ್ವಾಗತ, ಎಪಿಸಿ ಸದಾಶಿವ ಮನಗುಳಿ ಅವರಿಂದ ನಿರೂಪಣೆ ಮತ್ತು ನಿಸ್ತಂತು ಪಿಎಸ್‌ಐ ನಾಗಪ್ಪ ಖಾನಾಪೂರ್ ಅವರಿಂದ ವಂದನೆಗಳಾದವು.
ಶಿಬಿರದಲ್ಲಿ ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ಡಾ. ನವೀನ್ ದಿಲೀಪ್, ಡಾ. ವೆಂಕಟೇಶ್ ಬಾಬು ಜಿ., ಡಾ. ಪ್ರವೀಣ್ ಕುಮಾರ್ ಮತ್ತಿತರ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿ, ಸುಮಾರು ೧೧೨ ಪೊಲೀಸರಿಗೆ ಮತ್ತು ಪೊಲೀಸ್ ಕುಟುಂಬದವರಿಗೆ ತಪಾಸಣೆ ನಡೆಸಿ ಸಲಹೆಗಳನ್ನು ನೀಡಿದರು.