ಸುಪಾರಿ ಪಡೆದು ಕೊಲೆಗೆ ಸಂಚು: ಐವರು ಆರೋಪಿಗಳ ಬಂಧನ 3 ನಾಡ ಪಿಸ್ತೂಲ್, 11 ಜೀವಂತ ಗುಂಡು ಜಪ್ತಿ
ಕಲಬುರಗಿ,ಸೆ.30-20 ಲಕ್ಷ ರೂ.ಸುಪಾರಿ ಪಡೆದು ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಹಾರದ ಗೈಬುಸಾಬ ಹಾಜಿಸಾಬ್ ಸಾರವಾಡ, ಆಳಂದ ತಾಲ್ಲೂಕಿನ ಬೆಟ್ಟಜೇವರ್ಗಿಯ ಯಶ್ವಂತ ಶ್ರೀಪತಿ ಮೇಲಕೇರಿ, ಕಮಲಾಪೂರ ತಾಲ್ಲೂಕಿನ ಮಡಕಿಯ ಶಿವುಕುಮಾರ ಚಂದ್ರಶ್ಯಾ ಸಾಗರ ಅಲಿಯಾಸ್ ವಾಗ್ಧರಗಿ, ಆಳಂದ ತಾಲ್ಲೂಕಿನ ಭೋದನ ಗ್ರಾಮದ ಹಣಮಂತರಾಯ ಸಿದ್ರಾಮಪ್ಪ ಪಗಡೆ ಎಂಬುವವರನ್ನು ಬಂಧಿಸಿ 3 ಕಂಟ್ರಿ ಪಿಸ್ತೂಲ್ (ನಾಡ ಪಿಸ್ತೂಲ್), 11 ಜೀವಂತ ಗುಂಡುಗಳು, ಒಂದು ಬೈಕ್ ಮತ್ತು ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
2021ರಲ್ಲಿ ಆಳಂದ ತಾಲ್ಲೂಕಿನ ಬೋಧನÀ ಗ್ರಾಮದ ಹಣಮಂತರಾಯ ಪಗಡೆ ಅವರ ಮಗ ಶಿವಪುತ್ರ ಕೊಲೆಯಾಗಿತ್ತು. ತನ್ನ ಮಗನ ಕೊಲೆಯ ಸೇಡು ತೀರಿಸಿಕೊಳ್ಳಲು ಹಣಮಂತರಾಯ ಪಗಡೆ ಅವರು ಶರಣಬಸಪ್ಪ ಕಾಂದೆ ಅವರ ಕೊಲೆ ಮಾಡಲು 2022ರಲ್ಲಿ ಯಶ್ವಂತ, ಗೌತಮ ಮತ್ತು ಶಿವಕುಮಾರ ಸಾಗರ ಎಂಬುವವರಿಗೆ 20 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು. ಕೂಡಲೇ ಕೊಲೆ ಮಾಡಿದರೆ ಸಂಶಯ ಬರುತ್ತದೆ ಎಂದು ಆರೋಪಿಗಳು ಪ್ರಕರಣ ಕೋರ್ಟಿನಲ್ಲಿ ಮುಗಿದ ನಂತರ ಕೊಲೆ ಮಾಡಲು ನಿರ್ಧರಿಸಿ ಇಷ್ಟು ದಿನ ಕಾದಿದ್ದರು. ಈ ತಿಂಗಳ ಮೊದಲನೇ ವಾರದಲ್ಲಿ ಎಲ್ಲರೂ ಕೂಡಿಕೊಂಡು ಪ್ಲ್ಯಾನ್ ಮಾಡಿ ಮಧ್ಯಪ್ರದೇಶಕ್ಕೆ ಹೋಗಿ 3 ಕಂಟ್ರಿ ಪಿಸ್ತೂಲ್, 11 ಜೀವಂತ ಗುಂಡುಗಳನ್ನು ತೆಗೆದುಕೊಂಡು ಬಂದು 2-3 ದಿನಗಳ ಕಾಲ ಶರಣಬಸಪ್ಪ ಕಾಂದೆ ಅವರನ್ನು ಹಿಂಬಾಲಿಸಿ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್ ನಾಯಕ್, ಉತ್ತರ ಉಪ ವಿಭಾಗದ ಎಸಿಪಿ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ಚೌಕ್ ಪೊಲೀಸ್ ಠಾಣೆ ಪಿಐ ರಾಘವೇಂದ್ರ, ಸಬ್ ಅರ್ಬನ್ ಪೊಲೀಸ್ ಠಾಣೆ ಪಿಐ ಸಂತೋಷ ತಟ್ಟೆಪಲ್ಲಿ, ಎಎಸ್‍ಐ ಶಿವಶರಣಪ್ಪ, ಸಿಬ್ಬಂದಿಗಳಾದ ಶಿವಾನಂದ, ಗುರುಮೂರ್ತಿ, ರಾಜಕುಮಾರ, ತೌಸೀಫ್, ಮೋಸಿನ್, ನಾಗೇಂದ್ರ, ಮಾಳಪ್ಪ, ಮಂಜುನಾಥ ಕಾಡಾ, ಚೆನ್ನವೀರೇಶ, ಸುಮೀತ್ ಮತ್ತು ಬಂದೇನವಾಜ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಅವರು ತಿಳಿಸಿದರು.
ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.