ಮತದಾನದ ಹಕ್ಕು ಶ್ರೇಷ್ಠವಾದದ್ದು: ದೊಡ್ಡಮನಿ
ಕಲಬುರಗಿ,ಅ.೬-ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕು ಶ್ರೇಷ್ಠವಾದ್ದು, ಬಂದೂಕಿನ ಬುಲೆಟಿಗಿಂತ ಮತ ಪತ್ರದ ಬ್ಯಾಲೆಟ್ ನಿಂದ ಜನರು ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಉತ್ತಮ ಸರಕಾರ ರಚನೆಗೆ ಪಣ ತೊಡಬೇಕು ಅಂದಾಗ ಮಾತ್ರ ನಮ್ಮ ಮತ ನಮ್ಮ ರಕ್ಷಣೆಗೆ ನೆರವಾಗುವುದು ಎಂದು ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ನಗರದ ಹೊರವಲಯದಲ್ಲಿರುವ ಸಂತ ಜೆವಿಯರ್ಸ್ ಪದವಿ ಪೂರ್ವ ಕಾಲೇಜಿನ ಕಲಾಮೇಳ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜೆಗಳ ಪ್ರತಿಯೊಂದು ಮತವು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿ ಜನರ ಬದುಕು, ರಕ್ಷಣೆ ಮತ್ತು ರಾಷ್ಟ್ರದ ಸರ್ವೋತೋಮುಖ ಸುಧಾರಣೆಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ರೆ.ವಂ.ಫಾ.ಜಾನ್ ಥಾಮಸ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಬುದ್ಧಿ ಶಕ್ತಿಯನ್ನು ಬೆಳೆಸಿಕೊಂಡು ಹೃದಯವಂತಿಕೆಯಿAದ ಸಮಾಜವನ್ನು ಪ್ರೀತಿಸಿ ಕಾಯಕದ ಮೂಲಕ ರಾಷ್ಟ್ರ ಕಟ್ಟುವ ಕೆಲಸಕ್ಕೆ ಪಣ ತೊಡಬೇಕೆಂದರು.
ಎರಡನೆಯ ವಿಚಾರ ಗೋಷ್ಠಿಯ ಮಾರ್ಗದರ್ಶಕರಾಗಿ ಮಾತನಾಡಿದ ಪಂಡಿತ ಮದುಗುಣಕಿ ಅವರು ವಿದ್ಯಾರ್ಥಿಗಳು ಪಿಯುಸಿ ನಂತರ ಓದುವ ಆಸಕ್ತಿಯನ್ನು ಕಳೆದುಕೊಳ್ಳದೆ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಶ್ರಮದಿಂದ ಅಧ್ಯಯನ ಮಾಡಿ ಉನ್ನತ ಹುದ್ದೆಗಳ ಅವಕಾಶಗಳನ್ನು ಪಡೆದುಕೊಳ್ಳಬೇಕೆಂದರು. ಉಪನ್ಯಾಸಕರಾದ ಆನಂದ ಪ್ರಭು ಎಸ್.ಜೆ. ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಲಾ ವಿಭಾಗದ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಉಪ ಪ್ರಾಂಶುಪಾಲ ಜಗದೀಶ್ ದೊಡ್ಡಮನಿ, ಡಾ.ಮಹೇಶ ಎಸ್.ರುದ್ರಕರ್, ಮೇರಿ ಸುಪ್ರೀತಾ, ಫಾ.ರೋಶನ್ ಪಿಂಟೋ, ಸಿದ್ದಣ್ಣ ಎಸ್.ಕಲ್ಮನಿ, ವಿಶ್ವನಾಥ, ಮಾಧವರಾವ್ ತೋಳೆ, ಅವಿನಾಸ ಸಿ.ಫೆಲಿಕ್ಸ್, ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕು.ರೇಖಾ ಮತ್ತು ತಂಡದವರು ಪ್ರಾರ್ಥನೆ ಗೀತೆ ಹಾಡಿದರು. ಕು.ಮಹಾಂತೇಶ ನಿರೂಪಿಸಿದರು. ಡಾ.ಮಹೇಶ ಎಸ್.ರುದ್ರಕರ್ ವಂದಿಸಿದರು.