ಬಸ್ ತಂಗುದಾಣ ನಿರ್ಮಿಸುವಂತೆ ಸಾರ್ವಜನಿಕರ ಆಗ್ರಹ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.06:ಕೆ.ಆರ್.ಪೇಟೆ ಪಟ್ಟಣ ದಿನ ಕಳೆದಂತೆ ಬೆಳೆಯಲಾರಂಭಿಸಿದೆ ಇದಕ್ಕೆ ತಕ್ಕಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಯಾಣಿಕರು ಸಂಚರಿಸುವ ಸಂಖ್ಯೆಯೂ ಹೆಚ್ಚಾಗಿದೆ ಆದರೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ (ಟೌನ್ ಕ್ಲಬ್ ಹತ್ತಿರ) ಬಸ್ ಹತ್ತುವ ಇಳಿಯುವ ಪ್ರಯಾಣಿಕರಿಗೆ ಬಸ್ ತಂಗುದಾಣ ಇಲ್ಲದ ಕಾರಣ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲೇ ಮಳೆ ಬಿಸಿಲಲ್ಲಿ ಬಸ್‍ಗಾಗಿ ಕಾಯುವಂತ ಸ್ಥಿತಿ ಎದುರಾಗಿದೆ ಎಂದು ಹೇಮಾವತಿ ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.
ಹೇಮಾವತಿ ಬಡಾವಣೆಯ ನಿವಾಸಿಗಳು ಸೇರಿದಂತೆ ಆ ಭಾಗದ ಕೆಲವು ಗ್ರಾಮೀಣ ಭಾಗದ ಜನರು ನೂರಾರು ಸಂಖ್ಯೆಯಲ್ಲಿ ಚನ್ನರಾಯಪಟ್ಟಣ, ಹಾಸನ, ಅರಸೀಕೆರೆ,ಶಿವಮೊಗ್ಗ ಸೇರಿದಂತೆ ಹಲವು ನಗರಗಳಿಗೆ ಪ್ರಾಯಾಣಿಸಲು ಟೌನ್ ಕ್ಲಬ್ ಹತ್ತಿರ ಬಸ್ಸಿಗಾಗಿ ಕಾಯುತ್ತಾರೆ ಆದರೆ ಪ್ರಯಾಣಿಕರಿಗೆ ಬಸ್ ತಂಗುದಾಣವಿಲ್ಲದೆ ಬಸ್ಸುಗಳು ಬರುವವರೆಗೂ ಮಳೆ ಬಿಸಿಲಿನಲ್ಲಿ ಪುಟ್ ಪಾತ್ ನಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಿದೆ ಆದರೆ ಸಾರಿಗೆ ಅಧಿಕಾರಿಗಳು ಮಾತ್ರ ಬಸ್ಸಿಗಾಗಿ ಕಾಯುವ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ತಂಗುದಾಣದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಕೂಡಲೇ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಟೌನ್ ಕ್ಲಬ್ ಹತ್ತಿರ ಬಸ್ ತಂಗುದಾಣ ನಿರ್ಮಿಸುವಂತೆ ಹೇಮಾವತಿ ಬಡಾವಣೆಯ ನಿವಾಸಿಗಳಾದ ಟಿಎಪಿಸಿಎಂಎಸ್ ಚೇತನ್ ಕುಮಾರ್, ಎ.ಎಸ್.ರವಿ,ಕೃಷ್ಣೇಗೌಡ,ಜಯರಾಮು,ಕೆಂಪೇಗೌಡ,ಕೆ.ಆರ್.ಮಂಜುನಾಥ್, ಹರೀಶ್ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
ನಿಲುಗಡೆಗೆ ಮನವಿ:-
ಮೈಸೂರಿನಿಂದ ಕೆ.ಆರ್.ಪೇಟೆಗೆ ಬರುವ ಬಸ್ಸುಗಳು ಟಿ.ಬಿ.ಸರ್ಕಲ್ ಮತ್ತು ಕೇಂದ್ರ ಬಸ್ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಇಳಿಸುತ್ತಾರೆ ಅಲ್ಲಿಂದ ಮುಂದೆ ಹೇಮಾವತಿ ಬಡಾವಣೆಯ ಟೌನ್ ಕ್ಲಬ್ ಬಳಿ ಪ್ರಯಾಣಿಕರನ್ನು ಇಳಿಸಲು ನಿರಾಕರಿಸುತ್ತಾರೆ ಕೇಂದ್ರ ಬಸ್ ನಿಲ್ದಾಣದಿಂದ ಹೇಮಾವತಿ ಬಡಾವಣೆ ಸುಮಾರು ಎರಡು ಕಿ.ಮೀ.ದೂರವಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಮೈಸೂರು ಕಡೆಯಿಂದ ಬರುವ ಪ್ರಯಾಣಿಕರು ಟೌನ್ ಕ್ಲಬ್ ಬಳಿ ಇಳಿಯಲು ಅನುಕೂಲವಾಗುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ 04-11-2023 ರಂದು ಪಟ್ಟಣದಲ್ಲಿ ನಡೆದ ಜನತಾದರ್ಶನದ ವೇಳೆ ಜಿಲ್ಲಾಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಲಾಗಿತ್ತು ಆದರೆ ಯಾವುದೇ ಕ್ರಮವಾಗಿಲ್ಲ ಎಂದು ಹೇಮಾವತಿ ಬಡಾವಣೆಯ ನಿವಾಸಿಗಳು ದೂರಿದ್ದಾರೆ.