ದಲಿತರ ಕಾಲೋನಿಗಳ ನಿರ್ಲಕ್ಷ್ಯ: ಆರೋಪ
ತುಮಕೂರು, ಆ. ೧೦- ತಾಲ್ಲೂಕಿನ ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದೆ ದಲಿತರ ಮನೆಗಳಿಗೆ ನುಗ್ಗುತ್ತಿರುವುದರಿಂದ ಮಾರಣಾಂತಿಕ ಕಾಯಿಲೆಗಳು ಹರಡುತ್ತಿದ್ದು, ಸ್ಥಳೀಯ ಆಡಳಿತ ಇತ್ತ ಗಮನಹರಿಸಿಲ್ಲ ಎಂದು ಆರೋಪಿಸಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ. ನಿಧಿಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದ ನಿವಾಸಿಗಳಾಗಿರುವ ಅದರಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿರುವ ಹಲವಾರು ಮನೆಗಳಿದ್ದು ಪ್ರಸ್ತುತ ಮಳೆಗಾಲ ಆಗಿರುವುದರಿಂದ ಈ ಮನೆಗಳ ಪಕ್ಕದಲ್ಲಿ ಹಾದು ಹೋಗಿರುವ ಚರಂಡಿ ನೀರು ಪರಿಶಿಷ್ಠ ಜಾತಿಯವರು ವಾಸಿಸುವ ಕಾಲೋನಿಯ ಒಳಗೆ ನುಗ್ಗುತ್ತಿರುವುದಲ್ಲದೇ ಮನೆಗಳಿಗೂ ಸಹ ನುಗ್ಗಿ ಹಲವಾರು ಜನರು ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಈ ಪ್ರದೇಶದಲ್ಲಿ ಕಲುಷಿತ ನೀರು ನಿಂತು ದುರ್ನಾತ ಬೀರುತ್ತಿರುವುದಲ್ಲದೇ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂಗ್ಯೂನಂತಹ ಮಾರಕ ರೋಗಗಳ ಭೀತಿಯಿಂದ ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಈ ಭಾಗದಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ತೊಂದರೆಯಾಗಿದ್ದು ಈ ಭಾಗದಲ್ಲಿ ವಾಸಿಸುವ ಬಹುತೇಕ ಪರಿಶಿಷ್ಠ ಜಾತಿಗೆ ಸೇರಿದ ಮನೆಗಳಿವೆ ಎಂಬ ಕಾರಣಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ಸರಿಯಾದ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ, ಸ್ಟ್ರೀಟ್ ಲೈಟ್ ಒಳಗೊಂಡಂತೆ ಯಾವುದನ್ನೂ ಸಹ ಸರಿಪಡಿಸದೇ ನಮ್ಮಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರ ವರ್ಗದವರಿಗೆ ವಿಷಯ ತಿಳಿಸಿದ್ದಲ್ಲದೇ ಮನವಿ ಪತ್ರಗಳನ್ನು ನೀಡಿದರೂ ಸಹ ಯಾರೂ ತಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲವೆಂದು ಸ್ಥಳೀಯರಿಂದ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.
ತುರ್ತಾಗಿ ಸ್ಥಳ ಪರಿಶೀಲನೆ ಮಾಡಿದ ಲಿತರ ಕಾಲೋನಿಯಲ್ಲಿ ಉಂಟಾಗಿರುವ ತೊಂದರೆ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಹಾಗೂ ದಲಿತರುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಹ ಶೀಘ್ರದಲ್ಲಿಯೇ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಇಂದ್ರಕುಮಾರ್, ಮುಖಂಡರುಗಳಾದ ದರ್ಶನ್, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.