ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ
ಕೊರಟಗೆರೆ, ಆ. ೧೦- ಶಿಕ್ಷಣ ಇಲಾಖೆಯಲ್ಲಿ ೨೦೧೭ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿಂದ ಪದವೀಧರ ಶಿಕ್ಷಕರುಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸುವಂತೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪದಾಧಿಕಾರಿಗಳು ಮತ್ತು ಶಿಕ್ಷಕರು ತಹಶೀಲ್ದಾರ್ ಮತ್ತು ಬಿಇಓಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಂಜುನಾಥ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಹನುಮಂತರಾಯಪ್ಪ, ಕಳೆದ ೭ ವರ್ಷಗಳಿಂದ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಮಕ್ಕಳ ಭವಿಷ್ಯಕ್ಕೆ ಅನ್ಯಾಯವಾಗದಂತೆ ಸರ್ಕಾರ ಸಮಸ್ಯೆಯನ್ನು ಸರಿಪಡಿಸಬೇಕು ಎಂದರು.
೨೦೧೭ ರವರೆಗೆ ನೇಮಕವಾದ ಶಿಕ್ಷಕರನ್ನು ೧ ರಿಂದ ೭ ನೇ ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ ೨೦೧೭ ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ೨೦೧೬ ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು, ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೨೦೧೬ ರ ಪೂರ್ವದಂತೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೨೦೧೬ ರ ಪೂರ್ವದಂತೆ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಹಿರಿಯ ಮುಖ್ಯ ಶಿಕ್ಷಕರುಗಳಿಗೆ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದರು.
ಪ್ರಾಥಮಿಕ ಶಾಲಾ ಸಹ ಶಿಕ್ಷಕರಲ್ಲಿ ರಾಜ್ಯದಲ್ಲಿ ಸುಮಾರು ೮೦ ಸಾವಿರ ಕ್ಕೂ ಅಧಿಕ ಶಿಕ್ಷಕರು ಪದವಿಯೊಂದಿಗೆ ಬಿ,ಇಡಿ ವಿದ್ಯಾರ್ಹತೆ ಹೊಂದಿದ್ದರೂ ಇವರನ್ನು ೬ ರಿಂದ ೮ ನೇ ತರಗತಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸದೇ ಇರುವುದು ದುರಾದೃಷ್ಠಕರ. ಇತ್ತೀಚೆಗೆ ೨೦೧೬ ರಿಂದ ಶಿಕ್ಷಕರ ನೇಮಕಾತಿಯಾಗಿರುವ ಹಿನ್ನೆಲೆಯಲ್ಲಿ ಅಷ್ಟೇ ಸಂಖ್ಯೆಯಲ್ಲಿ ೧ ರಿಂದ ೫ ವೃಂದದ ಶಿಕ್ಷಕರ ಹೆಚ್ಚುವರಿ ಸಮಸ್ಯೆ ಸೃಷ್ಠಿಯಾಗಿದೆ. ಅದೇ ರೀತಿ ವರ್ಗಾವಣೆ ಪ್ರಕ್ರಿಯೆಯಲ್ಲೂ ಈ ವೃಂದ ಬಲದ ನಿಗದಿ ಸ್ಥಳಗಳ ಆಯ್ಕೆಯಲ್ಲಿ ತೀವ್ರವಾಗಿ ಶಿಕ್ಷಕರಿಗೆ ಸಮಸ್ಯೆ ಸೃಷ್ಠಿಸಿದೆ. ಇದರೊಂದಿಗೆ ಅನೇಕ ಸಮಸ್ಯೆಗಳು ಉಂಟಾಗಿದ್ದು ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ, ಪದಾಧಿಕಾರಿಗಳಾದ ಎಂ.ಈಶ್ವರಯ್ಯ, ಪರಮೇಶ್, ಕೃಷ್ಣಮೂರ್ತಿ, ಬಿ.ಟಿ.ಲೋಕೇಶ್, ಬಿ.ವಿ.ಗೋವಿಂದರಾಜು, ದೇವರಾಜು, ಮಂಜುನಾಥ್, ಮಾರುತಿಪ್ರಸನ್ನ, ಗೊಲ್ಲಳ್ಳಯ್ಯ, ಕರಿಬಸವಯ್ಯ, ನರಸಿಂಹಮೂರ್ತಿ, ರಂಗಶ್ಯಾಮಯ್ಯ, ನೇತ್ರಾವತಿ, ಶ್ವೇತಾ, ಆಶಾರಾಣಿ, ರಾಧಮಣಿ ಮತ್ತಿತರರು ಉಪಸ್ಥಿತರಿದ್ದರು.